Thursday, February 3, 2011

ಈ ಮಾಯಿ ಬರೆದಷ್ಟೂ ಮುಗಿಯದ ಕಥೆ


ಇಂದು ಮಿರ್ವಾಲಾ ಎಂಬ ಪುಟ್ಟ  ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ. ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.



ಇವಳ ಬಗ್ಗೆ ಬರೆಯೋಕೇನಿದೆ?
ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪೇಜುಗಟ್ಟಲೆ ಅವಳ ಬಗ್ಗೆ ಬರೆದವರಿದ್ದಾರೆ. ಇನ್ನೇನಿದೆ ನಾನು ಬರೆಯೋದು ಹೊಸತು? ನನಗೂ ತುಂಬಾ ಸಲ ಹಾಗೆನಿಸಿದೆ. ಆದರೂ, ಇನ್ನೊಂದೆಡೆ ಆ ಹೆಣ್ಣು ಮಗಳು ಬತ್ತದ ತೊರೆ, ಅವಳೆಂದೂ ಮುಗಿಯದ ಕತೆ ಎಂದನಿಸುತ್ತದೆ. ಏಕೆಂದರೆ, ಶೋಷಣೆಗೆ ಎದೆಗೊಟ್ಟು ‘ಸ್ವಾತಂತ್ರ್ಯ’ ವನ್ನು  ಕಂಡುಕೊಂಡ ಹೆಣ್ಣುಮಗಳು ಆಕೆ, ತನ್ನ ಬದುಕಿನ ಸೌಧವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಕಲಿಸಿದವಳು ಅವಳು. ಕಣ್ಣೀರ ಕೋಡಿಯಲ್ಲೇ ಭರವಸೆಯ ಹೂವಂತೆ ಅರಳಿದವಳು ಅವಳು.

ಅವಳೇ ಮುಕ್ತಾರ್ ಮಾಯಿ.
ಈ ಹೆಸರು ಕೇಳದವರು ವಿರಳ. ಹುಟ್ಟೂರು ಪಾಕಿಸ್ತಾನದ ಮೀರ್ವಾಲ. ಪಾಕಿಸ್ತಾನ ಅಂದ್ರೆ ಅಲ್ಲಿ  ಹೆಣ್ಣು ಮಕ್ಕಳ ಬದುಕೇನು? ಎನ್ನುವುದು ಜಗತ್ತಿಗೇ ಗೊತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ, ಚೌಕಟ್ಟುಗಳೇ ಬಂಧನ. ಹೆಣ್ಣು ಮಕ್ಕಳು ನಾಲ್ಕು ಗೋಡೆಯಾಚೆಯಿಂದ ಹೊರಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಒಂದು ವೇಳೆ ಮನೆಯಿಂದ ಹೊರಬಂದರೆ ಮಗಳ ಭವಿಷ್ಯ ಉಳಿಯುತ್ತೆ ಅನ್ನೋ ಗ್ಯಾರಂಟಿ ಹೆತ್ತವರಿಗೂ ಇಲ್ಲ. ನಿತ್ಯ ಅರಾಜಕತೆಯ ಬೀಡಾಗಿದ್ದ ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಒಬ್ಬಳು ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಬದುಕನ್ನೇ ಪಣವಾಗಿಟ್ಟು ಹೋರಾಟ ಮಾಡಿ, ಗೆಲುವು ಪಡೆದಳೆಂದರೆ ಅದು ಮುಕ್ತಾರ್ ಮಾಯಿ ಮಾತ್ರ! ಈಗ ಪಾಕಿಸ್ತಾನದ ಹೆಣ್ಣು ಮಕ್ಕಳಿಗೆ ಮುಕ್ತಾರ್ ಮಾಯಿ ಕೇವಲ ಸಾಮಾನ್ಯ ಹೆಣ್ಣು ಮಗಳಲ್ಲ, ಅವಳೊಬ್ಬಳು ತಾಯಿ, ಹೋರಾಟಗಾರ್ತಿ, ಇಲ್ಲಿನ ಹೆಣ್ಣು ಮಕ್ಕಳ ದನಿ.

ಮಾಯಿ ಹುಟ್ಟಿದ್ದೆಲ್ಲಿ?
ಮೀರ್ವಾಲ ಎನ್ನೋ ಪುಟ್ಟ ಹಳ್ಳಿ ಇದ್ದಿದ್ದು  ದಕ್ಷಿಣ ಪಾಕಿಸ್ತಾನದ ಪಂಜಾಬ್ ಭಾಗದಲ್ಲಿ. ನೆರೆಯಿಂದ ತತ್ತರಿಸಿದ ಊರಿದು. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಟ ಇಲ್ಲಿನ ಯಾವ ಕುಟುಂಬಗಳನ್ನೂ ಬಿಟ್ಟಿಲ್ಲ. ಹೆಣ್ಣು ಮಕ್ಕಳು ಮನೆಯೊಳಗಿನಿಂದ ಹೊರಬರುವಾಗಿಲ್ಲ.  'ಬುರ್ಖಾ ಬಂಧನ' ಕಡ್ಡಾಯ.  ಪುರುಷರ ಆಜ್ಞೆಯೇ  ಅಂತಿಮ.. ಸಂಸಾರ, ಬದುಕಿನ 'ನಿರಂಕುಶ' ಪ್ರಭುತ್ವದ ನಡುವೆ ಹೆಣ್ಣು ಮಕ್ಕಳ ಭಾವನೆಗಳನ್ನು, ಬದುಕನ್ನು ಅರ್ಥಮಾಡಿಕೊಳ್ಳುವವರು ಯಾರೂ ಇರಲಿಲ್ಲ. ಏನಾದರೂ ಅಪ್ಪಿ-ತಪ್ಪಿದರೆ ಬೆನ್ನ ಹಿಂದೆ ಫತ್ವಾಗಳು ಇದ್ದೇ ಇರುತ್ತವೆ. ಇಂಥ ಹಳ್ಳಿಯೇ ಮುಕ್ತಾರ್ ಮಾಯಿಗೆ ಜನ್ಮ ನೀಡಿತ್ತು.

ಹದಿನೆಂಟು ತುಂಬುವ ಮೊದಲೇ ಮುಕ್ತಾರ್ ಮಾಯಿಗೆ ಮದುವೆ ಮಾಡಲಾಯಿತು. ಆದರೆ, ಹೆಸರಿಗೆ ಮಾತ್ರ ಆತ ಗಂಡ. ಅವಳಿಗೆ  ತಾಳಿ ಬದುಕಾಗಲಿಲ್ಲ, ಬದಲು ಬಂಧನವಾಯಿತು. ಒಂದೇ ವರ್ಷದಲ್ಲಿ ಮುಕ್ತಾರ್ ಗಂಡನಿಗೆ ತಲಾಕ್ ನೀಡಿದಳು. ಆದರೆ, ನಂತರದ ಬದುಕನ್ನು ಆಕೆ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆ ಹಳ್ಳಿಯಲ್ಲಿ ಗಂಡನ ಬಿಟ್ಟು  ಬದುಕುವುದೆಂದರೆ ಸಮಾಜದ ದೃಷ್ಟಿಯಲ್ಲಿ ಅದು ದೊಡ್ಡ ಅಪರಾಧ. ಸಮಾಜದ ನಿಂದನೆ  ಮುಕ್ತಾರ್ ಮಾಯಿಯನ್ನೂ ಬಿಟ್ಟಿರಲಿಲ್ಲ. ಆದರೆ, ಅದ್ಯಾವುದಕ್ಕೂ ಆಕೆ ತಲೆಕೆಡಿಸಿಕೊಳ್ಳಲಿಲ್ಲ. ಮನೆಯಲ್ಲೇ ಕುಳಿತು ಕೈಕಸುಬಿಗಾಗಿ ಎಂಬ್ರಾಯಿಡರಿ ಕಲಿತಳು.

ಉಳ್ಳವರ ಹಸಿವಿಗೆ ಬಲಿಯಾದಳು
ಆದರೆ, ವರ್ಗಭೇದ ಮೀರ್ವಾಲ ಎಂಬ ಹಳ್ಳಿಗೂ ಹೊರತಾಗಿರಲಿಲ್ಲ. ಮೇಲ್ವರ್ಗದ ಹೆಣ್ಣು ಮಕ್ಕಳೊಂದಿಗೆ ಕಲೆತು ಬದುಕುವಂತಿರಲಿಲ್ಲ. ಒಂದು ದಿನ ಇದೇ ಕಾರಣಕ್ಕೆ ಉಳ್ಳವರು ಬೇಕಾಬಿಟ್ಟಿ ಥಳಿಸಿದ್ದರು. ಅವಳ ಹೆಣ್ಣು ಮಗಳೆಂದೂ ಅವರು ನೋಡಲಿಲ್ಲ. ಉಳ್ಳವರು/ಇಲ್ಲದವರು ಅನ್ನೋದೇ ಅಲ್ಲಿ ಮುಖ್ಯವಾಗಿತ್ತು. ಉಳ್ಳವರ ಮಾತೇ ವೇದವಾಕ್ಯ. ಆ ಹಳ್ಳಿಯ ಅದೆಷ್ಟೋ ಹೆಣ್ಣು ಮಕ್ಕಳು 'ಉಳ್ಳವರ ದೈಹಿಕ ಹಸಿವಿಗೆ' ಬಲಿಯಾಗುತ್ತಿದ್ದರು. ಆದರೆ, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರಲಿಲ್ಲ.

ಅಂದು ಜೂನ್ ೨೨, ೨೦೦೨. ಮಾಯಿಗೂ ಅದೇ 'ಬದುಕು' ಎದುರಾಯಿತು. ಗಂಡನನ್ನು ಬಿಟ್ಟವಳು ಎಂಬ ಹಣೆಬರಹ ಬೇರೆ. ಮೇಲ್ವರ್ಗದವರು  ತಮ್ಮ 'ಹಸಿವನ್ನು' ತಣಿಸಲು ಹೇಳಿದರು. ಆದರೆ, ಮುಕ್ತಾರ್ ಇದಕ್ಕೆ ಬಗ್ಗಲಿಲ್ಲ. ಒಲ್ಲೆ ಎಂದಳು. ಇದೇ ಕಾರಣಕ್ಕೆ ಅಂದೇ ರಾತ್ರಿ ಮಾಯಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಇಡೀ ರಾತ್ರಿ  ಆ ಪಾಪಿಗಳ ಬಂಧನದಿಂದ ಅವಳಿಗೆ ಹೊರಬರಲಾಗಲಿಲ್ಲ. ಮುಕ್ತಾರ್ ಅಪ್ಪ, ಅಮ್ಮ, ಚಿಕ್ಕಪ್ಪ ಎಲ್ಲರೂ ಅಲ್ಲಿ ಮೂಕ ಸಾಕ್ಷಿಯಾದರು. ಅವರಿಂದೇನೂ ಮಾಡಲಾಗಿಲ್ಲ. ಮುಕ್ತಾರ್ ಉಳ್ಳವರ ಹಸಿವಿಗೆ ಬಲಿಯಾದಳು.  ಬದುಕಲೇಬಾರದು ಅನಿಸಿತ್ತು ಆಕೆಗೆ! ಊಟ, ನಿದ್ದೆಬಿಟ್ಟು ಸಾವಿನ ದಾರಿಯನ್ನು ಹುಡುಕುತ್ತಿದ್ದ ಆಕೆಗೆ ಆಗ ಧೈರ್ಯ ಹೇಳಿದ ಅವಳ ಅಪ್ಪ- ಅಮ್ಮ  ಮತ್ತು ಅಲ್ಲಿನ ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖಂಡ. ವಿಶೇಷ ಅಂದ್ರೆ ಉಳ್ಳವರ ದೌರ್ಜನ್ಯವನ್ನು ಆತ ಖಂಡಿಸಿ ಮಾತನಾಡಿದ. ಮತ್ತೆ ಅವಳಲ್ಲಿ ಬದುಕುವ ಆಸೆ ಹುಟ್ಟಿತು. ಪೊಲೀಸರ ಮೊರೆ ಹೋದಳು. ಹಲವಾರು ಮಹಿಳಾ ಸಂಘಟನೆಗಳು ಆಕೆಯ ಜೊತೆಗೆ ನಿಂತರು.

ಊರಲ್ಲಿ ಅಕ್ಷರ ಜ್ಯೋತಿ
ಆಗ ಮಾಯಿಗೂ ಧೈರ್ಯ ಬಂತು. ಅವರನ್ನು ಬಂಧಿಸುವ ತನಕ ತನ್ನ ಹೋರಾಟ ನಿಲ್ಲದು ಎಂದು ಹಠ ತೊಟ್ಟಳು. ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಇಂಥ ದಿಟ್ಟ ಹೋರಾಟ ಕೈಗೊಳ್ಳಬೇಕಾದರೆ ಅಷ್ಟು ಸುಲಭವಲ್ಲ. ಆದರೆ, ''ತನಗೆ ರಕ್ಷಣೆ ನೀಡದ ದೇಶದ ಕಟ್ಟುಪಾಡು, ಸಂಪ್ರದಾಯಗಳು ಇಂದು ನನ್ನ ಹೋರಾಟವನ್ನು ನಿಲ್ಲಿಸುವ ಹಕ್ಕನ್ನು ಹೊಂದಿಲ್ಲ'' ಎಂದು ದಿಟ್ಟವಾಗಿ ನುಡಿದು ಹೊರಬಂದು ಹೋರಾಟಕ್ಕಿಳಿದಳು. ಆಕೆಯ ನಿರಂತರ ಹೋರಾಟದ ಫಲವಾಗಿ ಕೋರ್ಟ್ ಅತ್ಯಾಚಾರಿಗಳನ್ನು ಬಂಧಿಸಲು ಆದೇಶ ಹೊರಟಿತ್ತು. ಈ ನಡುವೆ ಅಲ್ಲಿನ ಸರ್ಕಾರ ಮಾಯಿಗೆ ಐದು ಲಕ್ಷ ರೂ.ಗಳ ಪರಿಹಾರ ನೀಡಿತ್ತು. ಅದೇ ದುಡ್ಡನ್ನು ತನ್ನೂರಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ನೆರೆಯಿಂದ ಬದುಕಿನ ಸೂರನ್ನೇ ಕಳೆದುಕೊಂಡವರಿಗಾಗಿ ಖರ್ಚು ಮಾಡಿದಳು. ಆಗಲೇ ಅವಳಿಗೊಂದು ಆಸೆ ಹುಟ್ಟಿತು. ಶಾಲೆ ತೆರೆಯಬೇಕೆಂಬ ಆಸೆಯಿತ್ತು. ಶಾಲೆ ತೆರೆದಳು. ಶಾಲೆಗೆ ಮಕ್ಕಳು ಬರದಿದ್ದಾಗ ಮನೆ-ಮನೆಗೆ ಹೋಗಿ ಹೆತ್ತವರಲ್ಲಿ ಜಾಗೃತಿ ಮೂಡಿಸಿದಳು. ೨೦೦೯ರಲ್ಲಿ ಮಾಯಿ ಮತ್ತೆ ಮದುವೆಯಾಗಿದ್ದಾಳೆ. ಸುಖ ಸಂಸಾರ ಅವಳದು.

ಇಂದು ಮಿರ್ವಾಲಾ ಎಂಬ ಪುಟ್ಟ  ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ.
ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.
ಈಗ ಹೇಳಿ, ಮಾಯಿ ಬರೆದಷ್ಟೂ ಮುಗಿಯದ ಕಥೆ ಅನಿಸುವುದಿಲ್ಲವೇ?

ಪ್ರಕಟ:http://hosadigantha.in/epaper.php?date=02-03-2011&name=02-03-2011-7