Thursday, February 3, 2011

ಈ ಮಾಯಿ ಬರೆದಷ್ಟೂ ಮುಗಿಯದ ಕಥೆ


ಇಂದು ಮಿರ್ವಾಲಾ ಎಂಬ ಪುಟ್ಟ  ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ. ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.



ಇವಳ ಬಗ್ಗೆ ಬರೆಯೋಕೇನಿದೆ?
ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪೇಜುಗಟ್ಟಲೆ ಅವಳ ಬಗ್ಗೆ ಬರೆದವರಿದ್ದಾರೆ. ಇನ್ನೇನಿದೆ ನಾನು ಬರೆಯೋದು ಹೊಸತು? ನನಗೂ ತುಂಬಾ ಸಲ ಹಾಗೆನಿಸಿದೆ. ಆದರೂ, ಇನ್ನೊಂದೆಡೆ ಆ ಹೆಣ್ಣು ಮಗಳು ಬತ್ತದ ತೊರೆ, ಅವಳೆಂದೂ ಮುಗಿಯದ ಕತೆ ಎಂದನಿಸುತ್ತದೆ. ಏಕೆಂದರೆ, ಶೋಷಣೆಗೆ ಎದೆಗೊಟ್ಟು ‘ಸ್ವಾತಂತ್ರ್ಯ’ ವನ್ನು  ಕಂಡುಕೊಂಡ ಹೆಣ್ಣುಮಗಳು ಆಕೆ, ತನ್ನ ಬದುಕಿನ ಸೌಧವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಕಲಿಸಿದವಳು ಅವಳು. ಕಣ್ಣೀರ ಕೋಡಿಯಲ್ಲೇ ಭರವಸೆಯ ಹೂವಂತೆ ಅರಳಿದವಳು ಅವಳು.

ಅವಳೇ ಮುಕ್ತಾರ್ ಮಾಯಿ.
ಈ ಹೆಸರು ಕೇಳದವರು ವಿರಳ. ಹುಟ್ಟೂರು ಪಾಕಿಸ್ತಾನದ ಮೀರ್ವಾಲ. ಪಾಕಿಸ್ತಾನ ಅಂದ್ರೆ ಅಲ್ಲಿ  ಹೆಣ್ಣು ಮಕ್ಕಳ ಬದುಕೇನು? ಎನ್ನುವುದು ಜಗತ್ತಿಗೇ ಗೊತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ, ಚೌಕಟ್ಟುಗಳೇ ಬಂಧನ. ಹೆಣ್ಣು ಮಕ್ಕಳು ನಾಲ್ಕು ಗೋಡೆಯಾಚೆಯಿಂದ ಹೊರಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಒಂದು ವೇಳೆ ಮನೆಯಿಂದ ಹೊರಬಂದರೆ ಮಗಳ ಭವಿಷ್ಯ ಉಳಿಯುತ್ತೆ ಅನ್ನೋ ಗ್ಯಾರಂಟಿ ಹೆತ್ತವರಿಗೂ ಇಲ್ಲ. ನಿತ್ಯ ಅರಾಜಕತೆಯ ಬೀಡಾಗಿದ್ದ ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಒಬ್ಬಳು ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಬದುಕನ್ನೇ ಪಣವಾಗಿಟ್ಟು ಹೋರಾಟ ಮಾಡಿ, ಗೆಲುವು ಪಡೆದಳೆಂದರೆ ಅದು ಮುಕ್ತಾರ್ ಮಾಯಿ ಮಾತ್ರ! ಈಗ ಪಾಕಿಸ್ತಾನದ ಹೆಣ್ಣು ಮಕ್ಕಳಿಗೆ ಮುಕ್ತಾರ್ ಮಾಯಿ ಕೇವಲ ಸಾಮಾನ್ಯ ಹೆಣ್ಣು ಮಗಳಲ್ಲ, ಅವಳೊಬ್ಬಳು ತಾಯಿ, ಹೋರಾಟಗಾರ್ತಿ, ಇಲ್ಲಿನ ಹೆಣ್ಣು ಮಕ್ಕಳ ದನಿ.

ಮಾಯಿ ಹುಟ್ಟಿದ್ದೆಲ್ಲಿ?
ಮೀರ್ವಾಲ ಎನ್ನೋ ಪುಟ್ಟ ಹಳ್ಳಿ ಇದ್ದಿದ್ದು  ದಕ್ಷಿಣ ಪಾಕಿಸ್ತಾನದ ಪಂಜಾಬ್ ಭಾಗದಲ್ಲಿ. ನೆರೆಯಿಂದ ತತ್ತರಿಸಿದ ಊರಿದು. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಟ ಇಲ್ಲಿನ ಯಾವ ಕುಟುಂಬಗಳನ್ನೂ ಬಿಟ್ಟಿಲ್ಲ. ಹೆಣ್ಣು ಮಕ್ಕಳು ಮನೆಯೊಳಗಿನಿಂದ ಹೊರಬರುವಾಗಿಲ್ಲ.  'ಬುರ್ಖಾ ಬಂಧನ' ಕಡ್ಡಾಯ.  ಪುರುಷರ ಆಜ್ಞೆಯೇ  ಅಂತಿಮ.. ಸಂಸಾರ, ಬದುಕಿನ 'ನಿರಂಕುಶ' ಪ್ರಭುತ್ವದ ನಡುವೆ ಹೆಣ್ಣು ಮಕ್ಕಳ ಭಾವನೆಗಳನ್ನು, ಬದುಕನ್ನು ಅರ್ಥಮಾಡಿಕೊಳ್ಳುವವರು ಯಾರೂ ಇರಲಿಲ್ಲ. ಏನಾದರೂ ಅಪ್ಪಿ-ತಪ್ಪಿದರೆ ಬೆನ್ನ ಹಿಂದೆ ಫತ್ವಾಗಳು ಇದ್ದೇ ಇರುತ್ತವೆ. ಇಂಥ ಹಳ್ಳಿಯೇ ಮುಕ್ತಾರ್ ಮಾಯಿಗೆ ಜನ್ಮ ನೀಡಿತ್ತು.

ಹದಿನೆಂಟು ತುಂಬುವ ಮೊದಲೇ ಮುಕ್ತಾರ್ ಮಾಯಿಗೆ ಮದುವೆ ಮಾಡಲಾಯಿತು. ಆದರೆ, ಹೆಸರಿಗೆ ಮಾತ್ರ ಆತ ಗಂಡ. ಅವಳಿಗೆ  ತಾಳಿ ಬದುಕಾಗಲಿಲ್ಲ, ಬದಲು ಬಂಧನವಾಯಿತು. ಒಂದೇ ವರ್ಷದಲ್ಲಿ ಮುಕ್ತಾರ್ ಗಂಡನಿಗೆ ತಲಾಕ್ ನೀಡಿದಳು. ಆದರೆ, ನಂತರದ ಬದುಕನ್ನು ಆಕೆ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆ ಹಳ್ಳಿಯಲ್ಲಿ ಗಂಡನ ಬಿಟ್ಟು  ಬದುಕುವುದೆಂದರೆ ಸಮಾಜದ ದೃಷ್ಟಿಯಲ್ಲಿ ಅದು ದೊಡ್ಡ ಅಪರಾಧ. ಸಮಾಜದ ನಿಂದನೆ  ಮುಕ್ತಾರ್ ಮಾಯಿಯನ್ನೂ ಬಿಟ್ಟಿರಲಿಲ್ಲ. ಆದರೆ, ಅದ್ಯಾವುದಕ್ಕೂ ಆಕೆ ತಲೆಕೆಡಿಸಿಕೊಳ್ಳಲಿಲ್ಲ. ಮನೆಯಲ್ಲೇ ಕುಳಿತು ಕೈಕಸುಬಿಗಾಗಿ ಎಂಬ್ರಾಯಿಡರಿ ಕಲಿತಳು.

ಉಳ್ಳವರ ಹಸಿವಿಗೆ ಬಲಿಯಾದಳು
ಆದರೆ, ವರ್ಗಭೇದ ಮೀರ್ವಾಲ ಎಂಬ ಹಳ್ಳಿಗೂ ಹೊರತಾಗಿರಲಿಲ್ಲ. ಮೇಲ್ವರ್ಗದ ಹೆಣ್ಣು ಮಕ್ಕಳೊಂದಿಗೆ ಕಲೆತು ಬದುಕುವಂತಿರಲಿಲ್ಲ. ಒಂದು ದಿನ ಇದೇ ಕಾರಣಕ್ಕೆ ಉಳ್ಳವರು ಬೇಕಾಬಿಟ್ಟಿ ಥಳಿಸಿದ್ದರು. ಅವಳ ಹೆಣ್ಣು ಮಗಳೆಂದೂ ಅವರು ನೋಡಲಿಲ್ಲ. ಉಳ್ಳವರು/ಇಲ್ಲದವರು ಅನ್ನೋದೇ ಅಲ್ಲಿ ಮುಖ್ಯವಾಗಿತ್ತು. ಉಳ್ಳವರ ಮಾತೇ ವೇದವಾಕ್ಯ. ಆ ಹಳ್ಳಿಯ ಅದೆಷ್ಟೋ ಹೆಣ್ಣು ಮಕ್ಕಳು 'ಉಳ್ಳವರ ದೈಹಿಕ ಹಸಿವಿಗೆ' ಬಲಿಯಾಗುತ್ತಿದ್ದರು. ಆದರೆ, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರಲಿಲ್ಲ.

ಅಂದು ಜೂನ್ ೨೨, ೨೦೦೨. ಮಾಯಿಗೂ ಅದೇ 'ಬದುಕು' ಎದುರಾಯಿತು. ಗಂಡನನ್ನು ಬಿಟ್ಟವಳು ಎಂಬ ಹಣೆಬರಹ ಬೇರೆ. ಮೇಲ್ವರ್ಗದವರು  ತಮ್ಮ 'ಹಸಿವನ್ನು' ತಣಿಸಲು ಹೇಳಿದರು. ಆದರೆ, ಮುಕ್ತಾರ್ ಇದಕ್ಕೆ ಬಗ್ಗಲಿಲ್ಲ. ಒಲ್ಲೆ ಎಂದಳು. ಇದೇ ಕಾರಣಕ್ಕೆ ಅಂದೇ ರಾತ್ರಿ ಮಾಯಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಇಡೀ ರಾತ್ರಿ  ಆ ಪಾಪಿಗಳ ಬಂಧನದಿಂದ ಅವಳಿಗೆ ಹೊರಬರಲಾಗಲಿಲ್ಲ. ಮುಕ್ತಾರ್ ಅಪ್ಪ, ಅಮ್ಮ, ಚಿಕ್ಕಪ್ಪ ಎಲ್ಲರೂ ಅಲ್ಲಿ ಮೂಕ ಸಾಕ್ಷಿಯಾದರು. ಅವರಿಂದೇನೂ ಮಾಡಲಾಗಿಲ್ಲ. ಮುಕ್ತಾರ್ ಉಳ್ಳವರ ಹಸಿವಿಗೆ ಬಲಿಯಾದಳು.  ಬದುಕಲೇಬಾರದು ಅನಿಸಿತ್ತು ಆಕೆಗೆ! ಊಟ, ನಿದ್ದೆಬಿಟ್ಟು ಸಾವಿನ ದಾರಿಯನ್ನು ಹುಡುಕುತ್ತಿದ್ದ ಆಕೆಗೆ ಆಗ ಧೈರ್ಯ ಹೇಳಿದ ಅವಳ ಅಪ್ಪ- ಅಮ್ಮ  ಮತ್ತು ಅಲ್ಲಿನ ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖಂಡ. ವಿಶೇಷ ಅಂದ್ರೆ ಉಳ್ಳವರ ದೌರ್ಜನ್ಯವನ್ನು ಆತ ಖಂಡಿಸಿ ಮಾತನಾಡಿದ. ಮತ್ತೆ ಅವಳಲ್ಲಿ ಬದುಕುವ ಆಸೆ ಹುಟ್ಟಿತು. ಪೊಲೀಸರ ಮೊರೆ ಹೋದಳು. ಹಲವಾರು ಮಹಿಳಾ ಸಂಘಟನೆಗಳು ಆಕೆಯ ಜೊತೆಗೆ ನಿಂತರು.

ಊರಲ್ಲಿ ಅಕ್ಷರ ಜ್ಯೋತಿ
ಆಗ ಮಾಯಿಗೂ ಧೈರ್ಯ ಬಂತು. ಅವರನ್ನು ಬಂಧಿಸುವ ತನಕ ತನ್ನ ಹೋರಾಟ ನಿಲ್ಲದು ಎಂದು ಹಠ ತೊಟ್ಟಳು. ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಇಂಥ ದಿಟ್ಟ ಹೋರಾಟ ಕೈಗೊಳ್ಳಬೇಕಾದರೆ ಅಷ್ಟು ಸುಲಭವಲ್ಲ. ಆದರೆ, ''ತನಗೆ ರಕ್ಷಣೆ ನೀಡದ ದೇಶದ ಕಟ್ಟುಪಾಡು, ಸಂಪ್ರದಾಯಗಳು ಇಂದು ನನ್ನ ಹೋರಾಟವನ್ನು ನಿಲ್ಲಿಸುವ ಹಕ್ಕನ್ನು ಹೊಂದಿಲ್ಲ'' ಎಂದು ದಿಟ್ಟವಾಗಿ ನುಡಿದು ಹೊರಬಂದು ಹೋರಾಟಕ್ಕಿಳಿದಳು. ಆಕೆಯ ನಿರಂತರ ಹೋರಾಟದ ಫಲವಾಗಿ ಕೋರ್ಟ್ ಅತ್ಯಾಚಾರಿಗಳನ್ನು ಬಂಧಿಸಲು ಆದೇಶ ಹೊರಟಿತ್ತು. ಈ ನಡುವೆ ಅಲ್ಲಿನ ಸರ್ಕಾರ ಮಾಯಿಗೆ ಐದು ಲಕ್ಷ ರೂ.ಗಳ ಪರಿಹಾರ ನೀಡಿತ್ತು. ಅದೇ ದುಡ್ಡನ್ನು ತನ್ನೂರಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ನೆರೆಯಿಂದ ಬದುಕಿನ ಸೂರನ್ನೇ ಕಳೆದುಕೊಂಡವರಿಗಾಗಿ ಖರ್ಚು ಮಾಡಿದಳು. ಆಗಲೇ ಅವಳಿಗೊಂದು ಆಸೆ ಹುಟ್ಟಿತು. ಶಾಲೆ ತೆರೆಯಬೇಕೆಂಬ ಆಸೆಯಿತ್ತು. ಶಾಲೆ ತೆರೆದಳು. ಶಾಲೆಗೆ ಮಕ್ಕಳು ಬರದಿದ್ದಾಗ ಮನೆ-ಮನೆಗೆ ಹೋಗಿ ಹೆತ್ತವರಲ್ಲಿ ಜಾಗೃತಿ ಮೂಡಿಸಿದಳು. ೨೦೦೯ರಲ್ಲಿ ಮಾಯಿ ಮತ್ತೆ ಮದುವೆಯಾಗಿದ್ದಾಳೆ. ಸುಖ ಸಂಸಾರ ಅವಳದು.

ಇಂದು ಮಿರ್ವಾಲಾ ಎಂಬ ಪುಟ್ಟ  ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ.
ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.
ಈಗ ಹೇಳಿ, ಮಾಯಿ ಬರೆದಷ್ಟೂ ಮುಗಿಯದ ಕಥೆ ಅನಿಸುವುದಿಲ್ಲವೇ?

ಪ್ರಕಟ:http://hosadigantha.in/epaper.php?date=02-03-2011&name=02-03-2011-7












Wednesday, January 19, 2011

ಕಥೆಯಾದಳು ಹುಡುಗಿ!

 ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲ‘ಗಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ.


   ನಗೆ ೨೨ ವರ್ಷ. ನಾವು ಐವರು ಹೆಣ್ಣುಮಕ್ಳು. ಮನೆಯಲ್ಲಿ ಬಡತನ. ನಮ್ಮ ಮದುವೆ ಕುರಿತು ಯೋಚನೆ ಮಾಡಿ ಮಾಡಿ ಅಪ್ಪಹಾಸಿಗೆ ಡಿದಿದ್ದ. ನಾನೇ ದೊಡ್ಡವಳು. ನನ್ನ ಕೊನೆಯ ತಂಗಿಯ ಹುಟ್ಟುವಾಗಲೇ ಹೆರಿಗೆಯಲ್ಲಿ ತೊಂದರೆಯಾಗಿ ಅಮ್ಮ ಸಾವನ್ನಪ್ಪಿದ್ದಳು.  ನಾನು ದೊಡ್ಡವಳಾಗಿದ್ದರಿಂದ ನನಗೆ ಸಣ್ಣ ವಯಸ್ಸಿನಲ್ಲೇ ಒಬ್ಬ ಮುದುಕನ ಜೊತೆ ಅಪ್ಪ ಮದುವೆ ಮಾಡಿದ್ದ. ಆದರೆ, ಅವನಿಗೆ ಆಗಲೇ ಮೂರು ಮಂದಿ ಪತ್ನಿಯರಿದ್ದರು. ಮರಳಿ ಮನೆಗೆ ಬಂದೆ. ಕೆಲಸ ಹುಡುಕುವುದು ಅನಿವಾರ್ಯವಾಯಿತು. ನಮ್ಮೂರಿನ ಅಂಕಲ್ ಒಬ್ರು ಕೆಲಸ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅಪ್ಪನಿಗೂ ಹೇಳದೆ ಅವನನ್ನು ನಂಬಿ ಮುಂಬೈಗೆ ತೆರಳಿದೆ.

    ನನಗಾಗ ಸಿಟಿ ಹೊಸತು. ನಮ್ಮೂರ ಹಳ್ಳಿ ಬಿಟ್ಟರೆ ಬೇರೆ ಪ್ರಪಂಚಾನೇ ಗೊತ್ತಿರಲಿಲ್ಲ. ಅಲ್ಲೊಂದು ಮನೆಯಲ್ಲಿ ನನ್ನ ಬಿಟ್ಟು ಅಂಕಲ್ ಊರಿಗೆ ವಾಪಾಸಾಗಿದ್ದರು. ಒಂದೆರಡು ದಿನ ಕಳೆದ ಮೇಲೆ ನನಗೆ ವಾಸ್ತವ ತಿಳಿಯಿತು. ನಾನು ಯಾರ ಮನೆಯಲ್ಲಿಯೂ ಕೆಲಸಕ್ಕೆ ಇರಲಿಲ್ಲ, ಬದಲಾಗಿ ವೇಶ್ಯೆಯಾಗಿ ನನ್ನ ದುಡಿಸಿಕೊಳ್ಳಲು ನನ್ನ ಕರೆತಂದಿದ್ದರು. ಮನೆಯಾಕೆಯ ಜೊತೆ ೩೨ ಮಂದಿ ವೇಶ್ಯೆಯರಿದ್ದರು. ಅವರು ದಿನಕ್ಕೆ ಇಂತಿಷ್ಟು ಹಣ ಸಂಪಾದಿಸಬೇಕೆಂದು ಆ ಒಡತಿ ಕಟ್ಟಪ್ಪಣೆ ಮಾಡಿದ್ದಳು.

    ನಾನು ವಿರೋಸಿದೆ. ವಾಪಾಸ್ ಮನೆಗೆ ಕಳುಸಲು ಪರಿಪರಿಯಾಗಿ ಬೇಡಿಕೊಂಡೆ. ಊಟ-ತಿಂಡಿ ಬಿಟ್ಟು ಪ್ರತಿಭಟಿಸಿದೆ. ಆದರೆ, ನಾನು ಗೆಲ್ಲಲಿಲ್ಲ. ಅವಳೇ ಗೆದ್ದಳು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಅಲ್ಲಿಗೇ ಎಲ್ಲವನ್ನೂ ಪೂರೈಕೆ ಮಾಡುತ್ತಿದ್ದಳು. ದಿನದಲ್ಲಿ ೧೦ರಿಂದ ೧೫ ಮಂದಿ ಪುರುಷರೂ ಬರುತ್ತಿದ್ದರು. ಅವರನ್ನು ಕಂಡಾಗಲೆಲ್ಲಾ ಪ್ರಾಣಿಗಳನ್ನು ಕಂಡತೆ ಅನಿಸುತ್ತಿತ್ತು. ಆದರೆ, ನಾನು ಪ್ರತಿಭಟಿಸುವಂತಿರಲಿಲ್ಲ. ತಂಗಿಯರ, ಅಪ್ಪನ, ನಮ್ಮನೆಯ ನೆನಪು ಕಾಡುತ್ತಿತ್ತು. ಸರಿಯಾದ ನಿದ್ದೆಯಿಲ್ಲ. ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆ? ಎಂದು ಪದೇ ಪದೇ ಕೊರಗುತ್ತಿದ್ದೆ. ಹೆಣ್ಣು ಜನ್ಮದ ಕುರಿತಾಗೇ ಅಸಹ್ಯವಾಗುತ್ತಿತ್ತು. ಆ ವಿಷಜಾಲದಿಂದ ನನಗೆ ಬಿಡುಗಡೆ ಸಿಕ್ಕಿರಲಿಲ್ಲ
    ತನ್ನ ಗತಕಾಲದ ಕಥೆ ಹೇಳಿ ಮುಗಿಸಿದಾಗ ಅರಿಲ್ಲದೆಯೇ ಆಕೆಯ ಕಣ್ಣಂಚಿನಲ್ಲಿ ಜಾರಿದ ಹನಿಬಿಂದುಗಳು ಪಾದವನ್ನು ತೊಳೆಯುತ್ತಿದ್ದವು. ಆ ಮಾರುಕಟ್ಟೆ ಸಂದಿನಲ್ಲಿ ಆಕಸ್ಮಿಕ ಎಂಬಂತೆ ಸಿಕ್ಕಿದ ಆಕೆಯ ಪರಿಚಯವೇ ಸಿಗದಷ್ಟು ಸೊರಗಿಹೋಗಿದ್ದಳು. ಹಿಂದೆ ನನಗೆ ಅವಳ ಪರಿಚಯವಾಗಿದ್ದು ಐದು ವರ್ಷಗಳ ಹಿಂದೆ ಯಾವುದೋ ಒಂದು ಪುಟ್ಟ ಕಾರ್ಯಕ್ರಮವೊಂದರಲ್ಲಿ. ಒಳ್ಳೆಯ ಗೆಳತಿಯಾಗಿದ್ದಳು. ಫೋನ್‌ಗಿಂತ ಪತ್ರವನ್ನೇ ಇಷ್ಟಪಡುತ್ತಿದ್ದ ಅವಳಿಂದ ಕಳೆದ ಎರಡು ವರ್ಷಗಳಿಂದ ಪತ್ರಗಳೂ ಬಂದಿರಲಿಲ್ಲ. ಪರಿಚಯ ಮಾಸುತ್ತಾ ಹೋಗಿತ್ತು. ಆದರೆ, ಎರಡು ವಾರದ ಂದೆ ಆ ತರಕಾರಿ ಮಾರುಕಟ್ಟೆ ಸಂದಿನಲ್ಲಿ ಅವಳು ಮತ್ತೆ ಎದುರಾಗಿದ್ದಳು. ಅವಳ ಕಥೆ ಕೇಳಿ ನಾನು ಮೌನವಾಗಿದ್ದೆ. ಅವಳ ಮೂಕರೋದನದ ಎದುರು ನಾನು ಅಸಹಾಯಕಳಾಗಿದ್ದೆ. ಈಕೆ ಬಾಗಲಕೋಟೆಯ ಹಳ್ಳಿಯೊಂದರ ಹುಡುಗಿ.

    "ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ''ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ. ಇತ್ತೀಚೆಗೆ ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು, ಮುಂಬೈಯ ಕಾಮಾಟಿಪುರ ಅಥವಾ ಪುಣೆಯ ಬುಧವಾರಪೇಟೆಯೇ ಆಗಲಿ, ಅಥವಾ ಬೆಂಗಳೂರಿನಂಥ ಹೈಟೆಕ್ ನಗರಗಳಲ್ಲಿ ಅನಕೃತವಾಗಿ ವೇಶ್ಯಾವಾಟಿಕೆ ನಡೆಸುವವರೇ ಆಗಿರಲಿ, ಅದರಲ್ಲಿ ಬಹುಪಾಲು ಮಂದಿ ಉತ್ತರ ಕರ್ನಾಟಕದ ಬಡ ಕುಟುಂಬದಿಂದ ಬಂದವರೇ! ಎಂದು.

    ದೇಶದಲ್ಲಿ ವೇಶ್ಯಾವಾಟಿಕೆ ಹೆಚ್ಚಲು ಮೂಲ ಕಾರಣವೇ ಬಡತನ ಮತ್ತು ನಿರುದ್ಯೋಗದಂಥ ಸಮಸ್ಯೆಗಳೇ. ಇದರಿಂದ ದೇಶದ ಸಾಂಸ್ಕತಿಕ ಮೌಲ್ಯಗಳು ಅಧಪತನಗೊಳ್ಳುತ್ತಿವೆ ಎಂದು ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯಪಟ್ಟಿತ್ತು. ಆದರೆ, ಇಂದಿಗೂ ವೇಶ್ಯಾವಾಟಿಕೆ ಕಾನೂನುಬದ್ಧವಾಗಬೇಕೆನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಕಾಮವೆಂಬುವುದು ನಿಜ ಎಂದ ಮೇಲೆ ವೇಶ್ಯಾವಾಟಿಕೆ ಅದೇಕೆ ಅಪಥ್ಯ,  ದೇವರು, ಋಮುನಿಗಳು ಕೂಡ ಇದರಿಂದ ಹೊರತಾಗಿಲ್ಲ, ಇದೊಂದು ಪುರಾತನ ವೃತ್ತಿ ಎನ್ನುವುದಾದರೆ ಅದನ್ನೇಕೆ ಕಾನೂನುಬದ್ಧಗೊಳಿಸಬಾರದು ಎನ್ನುವ ವಾದವನ್ನು ಮುಂದಿಡುವವರಿದ್ದಾರೆ.

    ಆದರೆ, ಈ ರೀತಿಯ ಚರ್ಚೆಯನ್ನು ಹುಟ್ಟುಹಾಕುವ ಬದಲು ವೇಶ್ಯಾವಾಟಿಕೆಯಂಥ ಸಮಸ್ಯೆಗೆ ಮೂಲ ಕಾರಣಗಳೇನು ಎಂಬುವುದನ್ನು ಚರ್ಚಿಸಬೇಕು. ವೇಶ್ಯಾವಾಟಿಕೆ ಪುರಾತನ ವೃತ್ತಿ ಆಗಿರಬಹುದು, ದೈಹಿಕ ದೌರ್ಬಲ್ಯಗಳೇ ಆಗಿರಬಹುದು ಹಾಗಂತ ಅದನ್ನು ಸಮಾಜ ಒಪ್ಪುವುದೇ? ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲವನ್ನೂ ಕಾನೂನಿಂದಲೇ ನಿಯಂತ್ರಿಸುವುದು ಕಷ್ಟ. ಆದರೆ, ಹೆಣ್ಣಮಕ್ಕಳ ಕಳ್ಳಸಾಗಣೆ ದಂಧೆಯನ್ನು  ಕಠಿಣ ಕಾನೂನು ಮೂಲಕ ತಡೆಗಟ್ಟಬಹುದು. ಅಂತೆಯೇ, ಬಡತನದಲ್ಲಿರುವ ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಉದ್ಯೋಗ ಸೌಲಭ್ಯ ನೀಡಿದರೆ ಇಂಥ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಸುಧಾರಿಸಬಹುದು. ಆದರೆ, ನಮ್ಮ ಸಮಸ್ಯೆಯ ಮೂಲ ಎಲ್ಲಿದೆ ಎಂದರೆ ವೇಶ್ಯಾವಾಟಿಕೆಯಂಥ ದಂಧೆಯನ್ನು ನಿಷೇಧಿಸಬೇಕು ಎಂದು ಬೀದಿಗಿಳಿದು ಹೋರಾಡುವವರೇ ಎಲ್ಲೋ ಒಂದು ಕಡೆ ಇಂಥ ಪ್ರವೃತ್ತಿಗಳಿಗೆ ಒಳಗೊಳಗೇ ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕೆ ನಿದರ್ಶನ ಮೇಲೆ ಹೇಳಿದ ಹುಡುಗಿ, ಆಕೆಯನ್ನು ಮುಂಬೈಗೆ ಸಾಗಿಸಿದ್ದು ಆ ಊರಿನ ಪ್ರಭಾವಿ ರಾಜಕಾರಣಿ!

    ಆ ಹುಡುಗಿಯ ಕಥೆ ಕೇಳುತ್ತಾ, ಒಂದಷ್ಟು ಯೋಚನೆಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದ್ದೆ. ತಲೆಯಲ್ಲಿ ಅವಳ ಬದುಕಿನ ಕಥೆ ಗಿರಕಿಹೊಡೆಯುತ್ತಿತ್ತು. ಇಂಥ ಸಮಸ್ಯೆಗಳ ನಡುವೆ ಸಿಕ್ಕಿ, ತನ್ನೆಲ್ಲಾ ಭಾವ-ಬದುಕನ್ನು ಮಾರಣಹೋಮ ಮಾಡುತ್ತಿದ್ದರಲ್ಲಾ? ಎಂದನಿಸಿತ್ತು.

Monday, January 3, 2011

ಅವಳೊಂದಿಗೆ ಭಾಷೆಯೂ ಮಣ್ಣಾಯಿತು


ಕಾಡುಹಂದಿ ಬೇಟೆ ಅಂದ್ರೆ ಅವಳಿಗಿಷ್ಟ. ದಟ್ಟಾರಣ್ಯದಲ್ಲಿ ಹೆಜ್ಜೆಗೊಂದು ಸಿಗುತ್ತಿದ್ದ ಆಮೆಗಳನ್ನೂ ಅವಳು ಬಿಟ್ಟವಳಲ್ಲ. ತಾನು ಹೋದಲೆಲ್ಲಾ ಬಿಲ್ಲು ಬಾಣಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಆ ಹೆಣ್ಣುಮಗಳು ತನ್ನ ಜೀವನಶಾಲೆಯನ್ನು ತಾನೇ ನಿರ್ಮಿಸಿಕೊಂಡವಳು. ಅವಳು ಹುಟ್ಟಿದ್ದು ಉತ್ತರ ಅಂಡಮಾನ್‌ನ ದಟ್ಟ ಕಾನನದಲ್ಲಿ. ೮೫ ವರ್ಷಗಳ ಹಿಂದೆ ಅವಳು ಹುಟ್ಟಿದಾಗ ಅವಳ ಜೊತೆ ಒಡನಾಡುವ ಸಂಗತಿಗಳಿದ್ದರು. ಸಮಾಜದ ಮುಖ್ಯವಾಹಿನಿ ಅಂದ್ರೆ ಅವಳಿಗೇನೂ ಗೊತ್ತಿಲ್ಲ. ವಿದ್ಯೆಯೆಂಬುವುದರ ನಂಟು ಆ ಕಾಡಿಗಿಲ್ಲ. ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವಿದ್ದಾಗ ಅಂಡಮಾನನ್ನು ‘ಶಿಕ್ಷಾರ್ಹ ತಾಣ’ವೆಂದು ಪರಿಗಣಿಸಿ, ಸ್ವಾತಂತ್ರಕ್ಕಾಗಿ ಹೋರಾಡಿದ ಅದೆಷ್ಟೋ ಭಾರತೀಯರನ್ನು ಅಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದಾಳೆ. ತನ್ನ ಪರಿವಾರದವರು ಕಳ್ಳಭಟ್ಟಿ ಕುಡಿದು ಎಂಜಾಯ್ ಮಾಡುತ್ತಿದ್ದಾಗ ತಾನೂ ಅವರೊಂದಿಗೆ ಸಂಭ್ರಮಿಸಿದ್ದಾಳೆ. ೨೦೦೪ರಲ್ಲಿ ಅಂಡಮಾನ್ ಪ್ರದೇಶಕ್ಕೆ ಭೀಕರ ಸುನಾಮಿ ಕಾಲಿಟ್ಟಾಗ ೩೫೧೩ ಮಂದಿ ಸಾವನ್ನಪ್ಪಿದ್ದರೂ, ಈಕೆ ಮಾತ್ರ ಬದುಕುಳಿದಿದ್ದಳು. ಇದು ಅವಳ ಅದೃಷ್ಟವೋ ಏನೋ?

ಅಂಥ ಉತ್ಸಾಹದ ಬದುಕು ಕಂಡ ಆ ಕಾಡಿನ ಮಹಿಳೆಯ ಹೆಸರು ಬೋ ಎಸ್‌ಆರ್...
ಅದೇನು ವಿಶೇಷ ಅಂತೀರಾ? ಇತ್ತೀಚೆಗಷ್ಟೇ ಬೋ ಎಸ್‌ಆರ್ ನಿಧನವಾಗಿದ್ದಾಳೆ. ಇದು ಇವಳ ಸಾವು ಮಾತ್ರವಲ್ಲ, ದೇಶದ ಪುರಾತನ ಭಾಷೆಯ ಸಾವು, ಸಾಂಸ್ಕೃತಿಕ ಪರಂಪರೆಯ ಸಾವು ಕೂಡಾ ಹೌದು.
ಬೋ ಎಂದರೆ....
ಬೋ ಎಂಬುವುದು ವಿಶಿಷ್ಟವಾದ ಬುಡಕಟ್ಟು ಭಾಷೆ. ಈ ಭಾಷೆಯ ತವರು ಆಫ್ರಿಕಾ. ೭೦,೦೦೦ ವರ್ಷಗಳ ಹಿಂದೆಯೇ ಬೋ ಎನ್ನುವ ಬುಡಕಟ್ಟು ಜನಾಂಗ ಆಗ್ನೇಯ ಏಷ್ಯಾ ಭಾಗಕ್ಕೆ ವಲಸೆ ಬಂದಿದ್ದರು. ಅಂತೆಯೇ ಅಂಡಮಾನಿನಲ್ಲೂ ಬೋ ಜನಾಂಗ ಅಸ್ತಿತ್ವ ಕಂಡುಕೊಂಡಿತ್ತು. ೧೮೫೮ರಲ್ಲಿ ಅಂಡಮಾನಿನಲ್ಲಿ ಬೋ ಜನಾಂಗಕ್ಕೆ ಸೇರಿದ ಸುಮಾರು ೫ ಸಾವಿರ ಜನರಿದ್ದರು. ಕ್ರಮೇಣ ಅಲ್ಲಿ ಬ್ರಿಟೀಷರು ತಮ್ಮ ಅಧಿಪತ್ಯ ಸ್ಥಾಪಿಸಿದಾಗ ಅಮಾಯಕ ಬೋ ಜನಾಂಗ ಬ್ರಿಟೀಷರ ದಬ್ಬಾಳಿಕೆಗೆ ಬಲಿಯಾದರು. ಸಮಾಜದ ಮುಖ್ಯವಾಹಿನಿಯ ಕುರಿತು ಒಂದಿಷ್ಟೂ ತಿಳಿವಿರದ ಬೋ ಜನರಿಗೆ ರೋಗಗಳು ಬಂದರೂ ಅದಕ್ಕೂ ಸಾವೇ ಪರಿಹಾರ. ಬ್ರಿಟೀಷರ ದಬ್ಬಾಳಿಕೆ ಮತ್ತು ಹೇಳಿಕೇಳದೆ ಬರುವ ಹಲವಾರು ಸಾಂಕ್ರಾಮಿಕ ರೋಗಗಳ ಪರಿಣಾಮ ಬೋ ಜನಾಂಗ ವಿನಾಶದ ಹಾದಿ ಹಿಡಿಯಿತು.
ಕಳೆದ ನಲವತ್ತು ವರ್ಷದಿಂದ ಬೋ ಎಸ್‌ಆರ್ ಅವಳದು ಏಕಾಂಗಿ ಬದುಕು. ಅವಳಿಗೆ ಬರುವುದು ಅದೊಂದೇ ಭಾಷೆ ಬೋ. ಹಾಗಾಗಿ ಸುತ್ತಮುತ್ತಲಿನ ಯಾರ ಜೊತೆಯೂ ಸಂವಹನ ಸಾಧ್ಯವಿರಲಿಲ್ಲ. ೧೯೭೦ರಲ್ಲಿ ಭಾರತ ಸರ್ಕಾರ ಅಂಡಮಾನಿನಲ್ಲಿದ್ದ ಬೋ ಎಸ್‌ಆರ್ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳಿಗೆ ಕಾಂಕ್ರೀಟ್ ಮನೆ ಮತ್ತು ೫೦೦ ರೂ. ಪಿಂಚಣಿ ಒದಗಿಸಿತ್ತು. ಆ ಪುಟ್ಟ ಮನೆಯೊಂದೇ ಬೋ ಸಂಸಾರ. ಬಹಳಷ್ಟು ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡ ಬೋ ಎಸ್‌ಆರ್‌ಗೆ
ಮಕ್ಕಳೂ ಇರಲಿಲ್ಲ. ಜೀವನದ ಕೊನೆ ಗಳಿಗೆಯಲ್ಲಿ ಆಕೆ, ''ನಮ್ಮ ಜನಾಂಗದಲ್ಲಿ ನಾನು ಒಬ್ಬಳೇ ಉಳಿದಿದ್ದೇನೆ. ನಾನು ಕೊನೆಯವಳು ಎಂಬುವುದು ಹೆಮ್ಮೆಯಾಗುತ್ತಿದೆ. ಆದರೆ, ನಾನು ಮತ್ತೆ ಹುಟ್ಟಿದ ಆ ದಟ್ಟಾರಣ್ಯಕ್ಕೆ ಮರಳಬೇಕು. ಈ ನಾಡಿಗಿಂತ ಆ ಕಾಡು ಚೆನ್ನ. ಅದೇ ಮುಳ್ಳುಹಂದಿ, ಆಮೆ ಬೇಟೆಯಾಡಬೇಕು. ಕಾಡಿನೊಂದಿಗೆ ಮತ್ತೆ ನಾನು ಬದುಕಬಲ್ಲೆ. ಕಾಡಿನಲ್ಲಿ ನನ್ನ ಭವಿಷ್ಯ ಇದೆ, ಕಾಡಾದರೂ ನನಗೆ ಸಂಗಾತಿಯಾಗುತ್ತಿತ್ತು.... ''ಎಂದು ಹಂಬಲಿಸುತ್ತಿದ್ದಳಂತೆ.

ಸಂಸ್ಕೃತಿ ಕಳಚಿಕೊಂಡಿತ್ತು

ಇದೀಗ ಬೋ ಎಸ್‌ಆರ್ ಅವಳನ್ನು ಕಳೆದುಕೊಂಡ ಅಂಡಮಾನಿನ ಜನತೆಗೆ ಅದೇನೋ ಆಪ್ತರನ್ನು ಕಳೆದುಕೊಂಡ ಭಾವ. ಆಕೆಯ ಸಾವಿನೊಂದಿಗೆ ಕೇವಲ ಒಂದು ಭಾಷೆ ಮಾತ್ರವಲ್ಲ ದೇಶದ ವಿಶಿಷ್ಟ ಸಂಸ್ಕೃತಿಯೊಂದು ಕಳಚಿಹೋಗಿಬಿಟ್ಟಿದೆ. ಭಾಷಾ ತಜ್ಞರು ಬೋ ಭಾಷೆಯ ಬಗ್ಗೆ ಅದೆಷ್ಟೋ ಅಧ್ಯಯನಗಳನ್ನು ಮಾಡಿದರೂ, ಕೊನೆಯ ಕ್ಷಣಗಳಲ್ಲಿ ಆಕೆ ತನ್ನ ಮಾತೃಭಾಷೆಯನ್ನು ಮಾತನಾಡಲಾಗದೇ ಹೋಗಿಬಿಟ್ಟಳು! ಬೋ ಎಸ್‌ಆರ್ ಸಾವು ಒಂದು ರೀತಿಯಲ್ಲಿ ನಮಗೊಂದು ರಿಮೈಂಡರ್ ಇದ್ದ ಹಾಗೆ. ಬುಡಕಟ್ಟು ಜನಾಂಗ ದೇಶದ ಸಾಂಸ್ಕೃತಿಕತೆಯ ಕೊಂಡಿ ಇದ್ದಂತೆ ಎಂದು ಬೋ ಜನಾಂಗದ ಕುರಿತು
ಅಧ್ಯಯನ ನಡೆಸಿರುವ ಭಾಷಾ ತಜ್ಞೆ ಅನ್ವಿತಾ ಅಬ್ಬಿ ಅವರ ಅಭಿಪ್ರಾಯ. ಅಭಿವೃದ್ಧಿ ಎಂದರೆ ಕೇವಲ ಮುಖ್ಯವಾಹಿನಿಗಳನ್ನು ಮಾತ್ರ ಗಮನಿಸುತ್ತೇವೆ. ಇಂದಿಗೂ ದೇಶದ ದಟ್ಟಾರಣ್ಯಗಳಲ್ಲಿ ಇಂಥ ಬುಡಕಟ್ಟು ಜನಾಂಗಗಳು ಅತ್ತ ಸಾಯದೆಯೇ, ಇತ್ತ ಬದುಕಲೂ ಆಗದ ಸ್ಥಿತಿಯಲ್ಲಿದ್ದಾರೆ. ಸಾವಿರಾರು ವರ್ಷಗಳ ಸಾಂಸ್ಕೃತಿಕತೆಯ ಕೊಂಡಿಗಳನ್ನು ಇಂದಿಗೂ ನಾವು ಗುರುತಿಸುವ ಅಗತ್ಯವಿದೆ.

ಹಳೆಯ ನೆನಪು
ಸುಮಾರು ೨೨ ವರ್ಷಗಳ ಹಿಂದಿನ ಕಥೆಯದು. ಆವಾಗ ಅಮ್ಮ ಕಟ್ಟಿಗೆ ತರಲು ಕಾಡಿಗೆ ಹೋದರೆ ನಾನೂ ಅಮ್ಮನ ಜೊತೆ ಹೋಗುತ್ತಿದ್ದೆ. ಕಾಡಿಗೆ ಹೋದರೆ, ದೊಡ್ಡ ಕಾಡುಗಳ ಮಧ್ಯೆ ಬುಟ್ಟಿ ಹೆಣೆಯುತ್ತಲೋ, ಇನ್ನೇನೋ ತಮ್ಮ ಕೆಲಸಗಳಲ್ಲಿ ನಿರತರಾಗಿರುವ 'ಕೊರಗ' ಜನಾಂಗದವರು ಸಿಗುತ್ತಿದ್ದರು. ಅವರ ಬಗ್ಗೆ ಅಮ್ಮನ ಬಳಿ ಕೇಳಿದರೆ, 'ಅವರನ್ನು ಕೊರಗರು ಎಂದು ಕರೆಯುತ್ತಾರೆ. ಅವರಿಗೆ ಮನೆ-ಮಠಗಳಿಲ್ಲ. ಅಲೆಮಾರಿಗಳಂತೆ ಹೋದಲ್ಲಿ ಜೀವಿಸುತ್ತಾರೆ' ಎನ್ನುತ್ತಿದ್ದಳು. ನಾನು ಸಣ್ಣವಳಿದ್ದಾಗ ಕಾಡಿಗೆ ಹೊಕ್ಕರೆ ಇಂಥ ಕೊರಗರು ತುಂಬಾ ಜನ ಸಿಗುತ್ತಿದ್ದರು. ತುಳುವಿಗಿಂತ ಭಿನ್ನವಾದ ಕೊರಗ ಭಾಷೆಯನ್ನೇ ಅವರು ಮಾತನಾಡುತ್ತಿದ್ದುದು ಇನ್ನೂ ನೆನಪು.

ಆದರೆ, ಕಾಲ ಎಷ್ಟು ಬದಲಾಗುತ್ತೆ ಅಂದ್ರೆ ಈಗ ನೋಡಿದ್ರೆ ನಮ್ಮೂರಲ್ಲಿ ಒಬ್ಬರೇ ಒಬ್ಬರು ಕೊರಗರು ಸಿಗುವುದು ಕೂಡ ಕಷ್ಟವೇ. ಒಂದು ವೇಳೆ ಇದ್ದರೂ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಯಾರಿಗೂ ಇವರು ಕೊರಗರು ಎಂದು ಗೊತ್ತಾಗುವುದೇ ಇಲ್ಲ. ಏಕೆಂದರೆ ಕೊರಗ ಭಾಷೆಯ ಮೇಲೆ ಹಿಡಿತ ಸ್ಥಾಪಿಸಿ ಅದರ ನಾಶಕ್ಕೆ ಕಾರಣವಾಗಿದ್ದು ತುಳು ಭಾಷೆ. ಅತ್ಯಂತ ಶೋಷಿತ ಜನಾಂಗವೆಂದೇ ಪರಿಗಣಿಸಲ್ಪಟ್ಟ ಕೊರಗ ಜನಾಂಗ ಈಗ ಮುಖ್ಯವಾಹಿನಿಯೊಳಗೆ ಬೆರೆತಿರುವುದು 'ನಾಗರೀಕತೆ'ಯನ್ನು ತನ್ನದಾಗಿಸಿಕೊಳ್ಳುವುದು ಮತ್ತು ಶೋಷಿತ ಸಮಾಜದಿಂದ ಬಿಡುಗಡೆ ಹೊಂದುವ ಸಂಕೇತವಾಗಿರಲೂಬಹುದು. ಆದರೆ, ಇಂದು ಅವರು ಮುಖ್ಯವಾಹಿನಿಯಲ್ಲಿ ಸೇರುವುದರ ಜೊತೆಗೆ, ಅವರ ಭಾಷೆಯೂ ಸತ್ತುಹೋಗಿದೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಂಸ್ಕೃತಿಕ ನೆಲೆಗಳನ್ನೇ ತೊರೆಯುವ ಅನಿವಾರ್ಯತೆ ಎದುರಾಗುತ್ತದೆ ಎಂಬುವುದಕ್ಕೆ 'ಕೊರಗ' ಜನಾಂಗವೂ ಉತ್ತಮ ಉದಾಹರಣೆಯಾದೀತು.

ಪ್ರಕಟ: http://www.hosadigantha.in/epaper.php?date=10-14-2010&name=10-14-2010-7

ಕಣ್ಣೀರ ಭಾಷೆ ಅರ್ಥವಾಗದವರಿಗೆ...


"ಒಬ್ಬ ವ್ಯಕ್ತಿಯ ಕಣ್ಣೀರು, ದುಃಖ, ವಿಷಾದಗಳು ಅರ್ಥವಾಗದವನಿಗೆ ಅಧಿಕಾರವೂ ಅರ್ಥವಾಗಲು ಸಾಧ್ಯವಿಲ್ಲ. ಈ ಮೂರು ಅರ್ಥವಾಗದವನು ಅಧಿಕಾರ ಎಂದರೆ ಮೋಜು ಎಂದು ಅರ್ಥಮಾಡಿಕೊಳ್ಳುವ ಅಪಾಯವಿದೆ'' ಬ್ರಿಟನ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ತನ್ನ ಆತ್ಮಕಥೆಯಲ್ಲಿ ಹೇಳಿದ್ದು ಹೀಗೆ. ಜನರ ಕಣ್ಣೀರು, ಕಣ್ಣೀರ ಭಾಷೆ ಅರ್ಥವಾದವನಿಗೆ ಮಾತ್ರ ಅಧಿಕಾರ ಎಂದರೆ ಏನೂಂತ ಅರ್ಥವಾಗಬಹುದು ಎನ್ನುವುದು ಚರ್ಚಿಲ್ ಮಾತು.

    ಹೌದು, ನನಗೂ ನೆನಪಾಯಿತು. ನಮ್ಮಲ್ಲೂ ಜನಪ್ರಿಯ ರಾಜಕಾರಣಿಗಳಿದ್ದಾರೆ.  ಜನರ ಕಣ್ಣೀರ ಜೊತೆ ತಾವೂ ಕಣ್ಣೀರಧಾರೆಯಾಗುವ ಜನಪ್ರತಿನಿಧಿಗಳಿದ್ದಾರೆ. ಕೆಲತಿಂಗಳ ಹಿಂದೆ ರಾಜ್ಯದಲ್ಲಿ ನೆರೆ ಬಂದಾಗ, ಜನರು ಕಷ್ಟಗಳನ್ನು ತೋಡಿಕೊಂಡು ಅತ್ತಾಗ ತಾವೂ ಅತ್ತು ನೀರಾದವರು ಇದ್ದಾರೆ!  ಗೋಲಿಬಾರ್‌ನಲ್ಲಿ ರೈತ ಗುಂಡೇಟಿಗೆ ಬಲಿಯಾದಾಗ ರೈತನ ಶವದೆದುರು ಗಳಗಳನೆ ಅತ್ತು ಮಾಧ್ಯಮದಲ್ಲಿ ದೊಡ್ಡ ಫೋಟೋವಾಗಿ ರಾರಾಜಿಸಿದ ರಾಜಕಾರಣಿಗಳಿಗೇನು ನಮ್ಮಲ್ಲಿ ಬರಗಾಲವಿಲ್ಲ.

    ಆದರೆ, ಚರ್ಚಿಲ್ ಹೇಳಿರುವ ಮಾತಿಗೂ, ನಮ್ಮ ರಾಜಕಾರಣಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.  ಎರಡನೇ ಮಹಾಯುದ್ಧದ ಸಮಯದಲ್ಲಿ ಚರ್ಚಿಲ್ ಮ್ಯಾಂಜೆಸ್ಟರ್‌ಗೆ ಹೋಗಿದ್ರಂತೆ. ಅಲ್ಲಿ ಚರ್ಚಿಲ್ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ವೇದಿಕೆ ಭರ್ಜರಿಯಾಗೇ ಸಿದ್ಧವಾಗಿತ್ತು. ಅವರು ವೇದಿಕೆ ಹತ್ತಬೇಕಾದ್ರೆ ಐವರು ಮಹಿಳೆಯರು ಬಂದು ಚರ್ಚಿಲ್ ಎದುರು ಜೋರಾಗಿ ಅಳತೊಡಿದ್ದರಂತೆ. ಅವರೆಲ್ಲರೂ ಯುದ್ಧದಲ್ಲಿ ಮಡಿದ ಯೋಧರ ಅಮ್ಮಂದಿರು. ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಅದುಮಿಡಲಾಗದೆ ಅವರು ರೋದಿಸಿದಾಗ, ಅವರನ್ನು ತಬ್ಬಿಕೊಂಡು ಚರ್ಚಿಲ್ ಕೂಡ ಎಳೆಮಗುವಿನಂತೆ ಅತ್ತರಂತೆ. ಕಣ್ಣೀರ ಕಡಲಾದ ಚರ್ಚಿಲ್ ಏನೂ ಮಾತನಾಡದೆ ಅಲ್ಲಿಂದ ಹೊರಟುಬಿಟ್ಟಿದ್ದರು. ಆದರೆ, ಹಾಗೇ ಹೊರಡಲಿಲ್ಲ. ಮರುದಿನ ಮತ್ತೆ ಬಂದು ಆ ತಾಯಂದಿರನ್ನು ಸಮಾಧಾನಿಸಿದ್ದರಂತೆ. ಯುದ್ಧ, ಸಾವು, ನೋವುಗಳ ಕುರಿತು ವಿವರಿಸಿದ್ದರಂತೆ. ಒಬ್ಬ ಜನಪ್ರತಿನಿಧಿ ಏನು ಮಾಡಬಹುದು ಅದೆಲ್ಲವನ್ನೂ ಮಾಡಿದರು. ಆ ಅಮ್ಮಂದಿರ ಮುಖದಲ್ಲಿ ಧೈರ್ಯದ ಕಳೆ ಮೂಡಿತ್ತು. ಹಾಗೇ ಹೊರಟಾಗ, ‘ಮುಂದಿನ ಜನ್ಮವಿದ್ದರೆ, ನಾನು ಐದು ಅವತಾರ ತಾಳಿ ನಿಮ್ಮ ಹೊಟ್ಟೆಯಲ್ಲಿ ಮರುಹುಟ್ಟು ಪಡೆಯುತ್ತೇನೆ ಎಂದಿದ್ದರಂತೆ!
ಅಬ್ಬಾ! ಹೃದಯದ ಮಾತು.
ಬಹುಶಃ ಇಂಥ ಹೃದಯವಂತ ಮಾತ್ರ ಜನರನ್ನು ಗೆಲ್ಲಬಲ್ಲ.

    ನಮ್ಮಲ್ಲಿ ರಾಜಕಾರಣಿಗಳು ಹೋದಲೆಲ್ಲಾ ಜನ ಅವರನ್ನು ಸುತ್ತುವರಿಯುತ್ತಾರೆ. ಕಷ್ಟಗಳನ್ನು ತೋಡಿಕೊಳ್ಳಲು ಹವಣಿಸುತ್ತಿರುತ್ತಾರೆ. ಆದರೆ,  ರಾಜಕಾರಣಿಗಳ ಭದ್ರತೆಗಾಗಿ ನೇಮಿಸುವ ಪೊಲೀಸರು ಜನರನ್ನು ಅವರ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಕೆಲ ರಾಜಕಾರಣಿಗಳು ಜನರು ಅಳುವಾಗ ಅತ್ತೇಬಿಡ್ತಾರೆ, ಮರುದಿನ ಅತ್ತ ಫೋಟೋ ಬಂದಿಲ್ಲವಾದರೆ ಅವರ ಪಿ.ಎ. ಫೋನ್ ಮಾಡಿ, ''ಸಚಿವ ಸಾಹೇಬ್ರ ಫೋಟೋನೇ ಬಂದಿಲ್ಲ ಪತ್ರಿಕೇಲಿ...''ಅಂತ ವರದಿ ಒಪ್ಪಿಸುತ್ತಾನೆ.
    ಚರ್ಚಿಲ್ ಜೊತೆ ನೆನಪಾಗುವವರು ಫ್ರಾನ್ಸ್ ದೇಶದ ಮಾಜಿ ಅಧ್ಯಕ್ಷ ಮಿತ್ತೆರಾಂದ್, "ನಾನು ಮೂಲಭೂತವಾಗಿ ರಾಜಕಾರಣಿಯಲ್ಲ. ರಾಜಕಾರಣ ಮತ್ತು ತತ್ವಶಾಸ್ತ್ರವನ್ನು ತಿಳಿಯಲೆತ್ನಿಸುವ  ನಮ್ರ ವಿದ್ಯಾರ್ಥಿ. ನಿಸರ್ಗದ ತಿಳುವಳಿಕೆ ಇಲ್ಲದೆ ಜನಸಾಮಾನ್ಯನ ನಿತ್ಯ ಬದುಕನ್ನು ಅರಿಯಲಾಗದೆ ಈ ರಾಜಕೀಯ ಕೃತಕ ಹೂವಿನಂತಿದೆ'' ಎಂದವರು ಮಿತ್ತೆರಾಂದ್.
    ಪ್ರಕೃತಿ ಪ್ರಿಯರಾದ ಮಿತ್ತೆರಾದ್, ''ಸಂಜೆಯ ಕಾಂತಿ ಗೊತ್ತೆ? ಗಗನಚುಂಬಿಸುವ ಓಕ್ ಮರಗಳ ನಡುವೆ ತೂರಿಬರುವ ಕಿರಣಗಳು ಎಷ್ಟು ಚೆಂದ, ಆಕಾಶದ ಅಸಂಖ್ಯ ಬಣ್ಣಗಳು ಎಷ್ಟು ಚಂದ?''  ಎಂದು ವರ್ಣಿಸುತ್ತಿದ್ದರು. ಒಂದು ಬಾರಿ ಇಸ್ರೇಲಿಗೆ ಭೇಟಿ ನೀಡಿದ ಮಿತ್ತೆರಾಂದ್, ''ಬದುಕುವ ಹಕ್ಕು ನಿಮಗಿರುವಂತೆ ಎಲ್ಲಾ ದೇಶಗಳ ಜನತೆಗೂ ಇದೆ. ಆದ್ದರಿಂದ  ನಾನು ನಿಮಗೆ ಸುಳ್ಳು ಹೇಳಿ ಹುರಿದುಂಬಿಸದೆ ಸ್ನೇಹಿತನಾಗಿ ಹೇಳುತ್ತಿದ್ದೇನೆ ಕೇಳಿ. ಪ್ಯಾಲೇಸ್ತೀನಿನ ಜನರಿಗೆ ಅವರ ದೇಶ ಸ್ವಾತಂತ್ರ್ಯವನ್ನು ನೀವು ಕೊಡಬೇಕು. ನಿಮ್ಮಷ್ಟೇ ನಿಮ್ಮ ನೆರೆಹೊರೆಯವರಿಗೂ ಬದುಕುವ ಹಕ್ಕಿದೆ'' ಎಂದಿದರೆಂತೆ!

    ಅಷ್ಟೇ ಅಲ್ಲ, ಇಸ್ರೇಲಿನಲ್ಲಿ ಭಾಷಣ ಮಾಡಿದ ''ನಾವೀಗ ಸೋಲಿಸಬೇಕಾಗಿರುವುದು ಬಂಡವಾಳ ಶಾಹಿಗಳ ಶಕ್ತಿಯನ್ನು . ಅಂದರೆ ಅದರರ್ಥ ಜನರನ್ನು ಭ್ರಷ್ಟಗೊಳಿಸುವ, ಜನರನ್ನು ಮಾರಾಟದ ವಸ್ತುಗಳನ್ನಾಗಿ ಮಾಡುವ, ಜನರನ್ನು ಕೊಲ್ಲುವ, ಹಿಂಸಿಸುವ ನಾಶಗೊಳಿಸುವ ಬಂಡವಾಳವನ್ನು , ಜನರ ಸೂಕ್ಷ್ಮಜ್ಞತೆಯನ್ನು ಕೊಂದು ಪಶುಪತಿಗಳಾಗಿಸುವ ಏಕ ಸ್ವಾಮ್ಯವನ್ನು'' ಎಂದಿದ್ದರು. ಅವರ ಮಾತಿನಿಂದಲೇ ಮಿತ್ತೆರಾಂದ್ ವ್ಯಕ್ತಿತ್ವ ತಿಳಿಯಬಹುದು.

    ಯಾವುದೇ ರಾಜಕಾರಣಿಗೆ ಇಂಥ ಸೂಕ್ಷ್ಮ ಸಂವೇದನೆಯೊಂದಿದ್ದರೆ ಮಾತ್ರ ಅವನು ಜನರನ್ನು ಅರ್ಥಮಾಡಿಕೊಳ್ಳ ಮತ್ತು ಜನರ ಕಣ್ಣೀರ ಭಾಷೆಯನ್ನೂ, ಅಧಿಕಾರವನ್ನೂ ಅರ್ಥಮಾಡಿಕೊಳ್ಳಬಲ್ಲ. ಆದರೆ, ಇಂಥ ಸಂವೇದನೆ ಯಾರಲ್ಲಿದೆ ಎಂದು ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗುವುದು ಮಾತ್ರ ಕಷ್ಟವೇ. ಇತ್ತೀಚೆಗೆ ಪಿ. ಲಂಕೇಶ್  ಅವರ ಟೀಕೆ-ಟಿಪ್ಪಣಿ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು ಮಿತ್ತೆರಾಂದ್ ಕುರಿತು, 'ಫ್ರಾನ್ಸ್‌ನ ನಳನಳಿಸುವ ಗುಲಾಬಿ' ಎಂದು ಬರೆದಿದ್ದರು. ಮನದಾಳದಲ್ಲಿ ಚರ್ಚಿಲ್, ಮಿತ್ತೆರಾಂದ್ ಮತ್ತು ನಮ್ಮ ಈಗಿನ 'ಮುಖವಾಡ' ಧರಿಸಿದ ಅದೆಷ್ಟೋ ರಾಜಕಾರಣಿಗಳ ಮುಖ ಸರಿದುಹೋಯಿತು.

ಈ ಶಾಲೆಗೆ ಬಂದ್ರೆ ..."೧೦ ರೂ, ಒಂದು ಟಾಯ್ಲೆಟ್ ಫ್ರೀ''!

ಆ ಹಳ್ಳಿಯ ಹೆಣ್ಣುಮಕ್ಕಳಿಗೆ ತೊಟ್ಟಿಲಲ್ಲೇ ಕಂಕಣಭಾಗ್ಯ. ಅಲ್ಲಿನ ಹೆಣ್ಣುಮಕ್ಕಳ್ಯಾರೂ ಓದು-ಬರಹದ ಕನಸು ಕಂಡವರಲ್ಲ. ಏನಿದ್ದರೂ ಗಂಡಸರು ದುಡಿದ ಚಿಕ್ಕಾಸಿಗೆ ಕೈಯೊಡ್ಡಿ ನಿಲ್ಲಬೇಕು. ಬದುಕಿನಲ್ಲಿ ಯಾವ  ಭರವಸೆಯನ್ನೂ ಕಟ್ಟಿಕೊಳ್ಳಲಾಗದ ಆ ಹೆಣ್ಣುಮಕ್ಕಳು ನಾಲ್ಕು ಗೋಡೆಗಳ ಮಧ್ಯೆಗಷ್ಟೇ ಸೀಮಿತವಾಗಿದ್ದರು.
ಇದು ಉತ್ತರ ಪ್ರದೇಶದ ಅನೂಪ್‌ಷಾರ‍್ಹ್ ಎಂಬ ಕುಗ್ರಾಮ.

ಉತ್ತರ ಪ್ರದೇಶದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಪ್ರಮಾಣ ಶೇ. ೪೩ ಇದ್ದರೂ, ಈ ಹಳ್ಳಿಯ ಪಾಲು ಈ ಅಂಕಿ-ಅಂಶದಲ್ಲಿ  ಸ್ಥಾನ ಪಡೆದಿಲ್ಲ. ಅಂಥ ಕುಗ್ರಾಮದಲ್ಲಿ  ಕಳೆದ ಹತ್ತು ವರ್ಷಗಳಲ್ಲಿ  'ಶಿಕ್ಷಣ ಕ್ರಾಂತಿ'ಯೇ ಆಗಿಬಿಟ್ಟಿದೆ. ಆ ಹಳ್ಳಿಯಲ್ಲಿದ್ದ ಸರ್ಕಾರಿ ಶಾಲೆ ಒಂದಿಬ್ಬರು ವಿದ್ಯಾರ್ಥಿನಿಯರನ್ನು ಪಡೆಯಲು ಪರದಾಡುತ್ತಿದ್ದರೆ, Pardada Pardadi ಎಂಬ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಮೀರಿದೆ. ವರ್ಷಂಪ್ರತಿ ಅಪ್ಲಿಕೇಶನ್ ಹಿಡಿದು ಬರುವವರ ಸಂಖ್ಯೆ ಹೆಚ್ಚಿಬಿಟ್ಟಿದೆ. ಇಂಥ ಕ್ರಾಂತಿಗೆ ಕಾರಣವಾಗಿದ್ದು  ನಿವೃತ್ತ ಕಾರ್ಪೋರೇಟ್ ಅಧಿಕಾರಿಯೊಬ್ಬರು.

ಅವರ ಹೆಸರು ವಿರೇಂದ್ರ ಸಿಂಗ್.
ವಿರೇಂದ್ರ ಸಿಂಗ್ ಅವರು ಅಮೆರಿಕದ ಡೂಪಾಂಟ್ ಎನ್ನುವ ಪ್ರತಿಷ್ಠಿತ ಕೆಮಿಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕೈ ತುಂಬಾ ಸಂಬಳ. ಮನೆಯಲ್ಲಿಯೂ ಬಡತನದ ಗಂಧಗಾಳಿ ಇಲ್ಲ. ದುಡ್ಡಿನಾಸಿಗೆಯಲ್ಲೇ ಬೆಳೆದ ಆ ಫ್ಯಾಮಿಲಿಗೆ ಸಿಂಗ್ ಅವರೇನೂ ಆಧಾರವಾಗಿರಲಿಲ್ಲ. ಸಮಾಜ ಸೇವೆ ಅಂದ್ರೆ ಆ ಮನುಷ್ಯನಿಗೆ ಅದೇನಂತಾನೇ ಗೊತ್ತಿರಲಿಲ್ಲ. ಆದರೂ, ಸ್ವತಃ ಕೆಮಿಕಲ್ ಕಂಪನಿಯ ಮುಖ್ಯಸ್ಥನ ಹುದ್ದೆಯಲ್ಲಿದ್ದ ಸಿಂಗ್ ಅವರಿಗೆ ೧೯೮೪ರಲ್ಲಿ ನಡೆದ ಭೋಪಾಲ್ ಅನಿಲ ದುರಂತ ಮನ ಕೆಡಿಸಿತು. ಅಲ್ಲಿ ಉಂಟಾದ ಸಾವು-ನೋವುಗಳಿಗೆ ಅರಿವಿಲ್ಲದೆಯೇ ಕಂಬನಿ ಮಿಡಿದರು. ದುರಂತದಿಂದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಇಂದಿಗೂ ದುರಂತ ನಡೆದ ಸುತ್ತಮುತ್ತಲಿನ ಜನ ಆ ದುರಂತದ ಪಾಪದಿಂದ ಮುಕ್ತರಾಗಿಲ್ಲ. ಇವರೆಲ್ಲ  ನಾನು ಹುಟ್ಟಿದ ನೆಲ ಭಾರತದವರು, ನಾನೂ ಅದೇ ಪುಣ್ಯಭೂಮಿಯಲ್ಲಿ  ಜನಿಸಿದ್ದು ...ಎಂದು ತಮ್ಮೊಳಗೆ ಮರುಗಿದರು. ಆವಾಗಲೇ ಅವರಿಗೆ ಅನಿಸಿದ್ದು; ನನ್ನ ದೇಶಕ್ಕಾಗಿ ನಾನೇನಾದರೂ ಮಾಡಲೇಬೇಕು ಎಂದು!


ಆಗ ಹೊಳೆದಿದ್ದೇ ಅನೂಪ್‌ಷಾರ್ಹ್ ಎಂಬ ಗ್ರಾಮ. ಓದಿನ ಬೆಳಕಿನ್ನೂ ಹಚ್ಚದ ಅಲ್ಲಿಯ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರೆ ನೂರಾರು ಹೆಣ್ಣುಮಕ್ಕಳು ಓದಿ ವಿದ್ಯಾವಂತರಾಗಬಹುದು. ಆಗ ನನಗೆ ಜನ್ಮನೀಡಿದ ಭಾರತ ನೆಲಕ್ಕೆ ನಾನೇನಾದರೂ ನೀಡಿದಾಗೆ ಆಗುತ್ತೆ ಎಂಬ ದೃಢ ನಿರ್ಧಾರಕ್ಕೆ ಬಂದರು. ಅದು ನಿವೃತ್ತಿಯ ವಯಸ್ಸುನೂ ಹೌದು. ೩೫ ವರ್ಷ ಕೈತುಂಬಾ ದುಡ್ಡು ನೀಡಿದ ಡೂ ಪಾಂಟ್ ಸಂಸ್ಥೆಗೆ ಗುಡ್ ಬೈ ಹೇಳಿದರು. ೨೦೦೦ರಲ್ಲಿ  ಆ ಹಳ್ಳಿಯಲ್ಲಿ ಶಾಲೆಯೊಂದನ್ನು ಆರಂಭಿಸಿಯೇ ಬಿಟ್ಟರು. ಆಗ  ಆ ಶಾಲೆಗೆ ಸೇರಿದ ಹೆಣ್ಣು ಮಕ್ಕಳ ಸಂಖ್ಯೆ ಕೇವಲ ೩೫. ಆದರೆ, ಅಲ್ಲಿನ ಶಾಲೆಗಳಲ್ಲಿ  ವಿದ್ಯಾರ್ಥಿಗಳನ್ನು ಹೊಂದಿಸುವುದೇ ಹರಸಾಹಸದ ಕೆಲಸವಾಗಿತ್ತು. ಅದಕ್ಕೆ ಅವರು ಕಂಡುಕೊಂಡ ಉಪಾಯ ಇನ್ನೂ ವಿಭಿನ್ನ.

ಕ್ಲಿಕ್ ಆಯಿತು ಐಡಿಯಾ....
""ನನ್ನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ ೧೦ ರೂ. ಮತ್ತು ಮೂರು ಹೊತ್ತಿನ ಊಟ ನೀಡುತ್ತೇನೆ. ಹಾಗೆಯೇ ಎರಡು ವರ್ಷದ ತಪ್ಪದೆ ಶಾಲೆಗೆ ಹಾಜರಾದ್ರೆ ಒಂದು ಸೈಕಲ್ ಮತ್ತು ಮೂರು ವರ್ಷ  ತಪ್ಪದೆ ಹಾಜರಾದರೆ ನಿಮ್ಮ ಮನೆಗೆ ಒಂದು ಶೌಚಾಲಯ ನೀಡುತ್ತೇನೆ'' ಎಂದು ಘೋಷಿಸಿಯೇ ಬಿಟ್ಟರು ಸಿಂಗ್!  ವಿರೇಂದ್ರ ಸಿಂಗ್ ಅವರ ಘೋಷಣೆಗಳು ಅಲ್ಲಿನ  ಹೆತ್ತವರ ಕಿವಿಗೆ ಬಿದ್ದಿದ್ದೇ ತಡ, ತಿಪ್ಪರಲಾಗ ಹಾಕಿಯಾದ್ರೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಹಠಕ್ಕೆ ಬಿದ್ದರು. ತಮ್ಮ ಮಕ್ಕಳಿಗೆ ಮೂರು ಹೊತ್ತಿನ ಊಟ,ಹತ್ತು ರೂ, ಸೈಕಲ್, ಶೌಚಾಲಯ ಹೊಟ್ಟೆಗೆ ಹಿಟ್ಟಿಲ್ಲದವರ ಬದುಕಿಗೇ
ಆಧಾರವಾಯಿತು. . ಇಂಥದ್ದೂ  ಪ್ಲಾನ್ ಮಾಡುತ್ತಾರೋ? ಎಂದು ರೇಂದ್ರ ಸಿಂಗ್  ಅವರ ಈ ಘೋಷಣೆಯನ್ನು ಕೇಳಿದಾಗ ಆಡಿಕೊಂಡವರೆಷ್ಟೋ. ಆದರೆ, ರೇಂದ್ರ ಅವರ ಬಂಪರ್ ಐಡಿಯಾ ಕ್ಲಿಕ್ ಕೂಡ ಆಯಿತು. ವಾರದ ಎಲ್ಲಾ ದಿನಗಳಲ್ಲೂ  ಎಲ್ಲಾ ಮಕ್ಕಳೂ ಹಾಜರಾಗುತ್ತಿದ್ದರು. ಅಲ್ಲಿಯವರೆಗೆ ಶಾಲೆಗೆ ಕಳುಹಿಸುವುದೆಂದರೆ ಹಿಂದೆ-ಮುಂದೆ ನೋಡುತ್ತಿದ್ದ ಹೆತ್ತವರೂ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೇ ಕರೆತಂದು ಬಿಟ್ಟುಹೋಗುತ್ತಿದ್ದರು. ಇಂದು ಈ ಶಾಲೆಯ ವಿದ್ಯಾರ್ಥಿನಿಯರ ಸಂಖ್ಯೆ  ಎಷ್ಟು ಗೊತ್ತಾ? ಒಂದು ಸಾವಿರ ಮೀರಿದೆ!!

ಪುಸ್ತಕದ ಬದನೆಕಾಯಿಗಳಲ್ಲ...
ಕಳೆದ ೧೦ ವರ್ಷಗಳಲ್ಲಿ ಈ ಶಾಲೆಯಲ್ಲಿ ಓದಿ ಪದವಿ ಪಡೆದು ಭವಿಷ್ಯ ಕಟ್ಟಿಕೊಂಡವರ ಸಂಖ್ಯೆ ಅರ್ಧಶತಕ ದಾಟಿದೆ. ಪ್ರತಿ ವರ್ಷ ಶಾಲೆಗೆ ಬರುವವರ ಸಂಖ್ಯೆ, ಶಾಲಾ ವತಿಯಿಂದ ಶೌಚಾಲಯ, ಸೈಕಲ್ಲು
ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ ಯಾವ ಸರ್ಕಾರಿ ಶಾಲೆಗಳು ಕಾಣದ ಬೃಹತ್ ಪ್ರಗತಿಯತ್ತ ಈ ಶಾಲೆ ಮುಂದಡಿಯಿಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ  ಈ ಶಾಲೆ ಹತ್ತು ಗ್ರಾಮಗಳನ್ನು ಕವರ್ ಮಾಡಿದೆ. ಹಾಗಂತ ಇಲ್ಲಿಯ ವಿದ್ಯಾರ್ಥಿನಿಯರು ಬರೇ ಪುಸ್ತಕದ ಬದನೆಕಾಯಿಗಳಲ್ಲ. ಇಲ್ಲಿ  ಬೆಳಿಗ್ಗೆ  ತರಗತಿಗಳಿಗೆ  ಹಾಜರಾದರೆ, ಸಂಜೆಯ ಹೊತ್ತು ಪಠ್ಯೇತರ ಚಟುವಟಿಕೆಗಳಿಗೆ ಮೀಸಲು. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಯಾರ ಮೇಲೂ ಅವಲಂಬಿಸಬಾರದು. ತಮ್ಮ ಬದುಕನ್ನು ತಾವೇ ಕಟ್ಟಿಕೋಬೇಕು ಅನ್ನೋ ಉದ್ದೇಶದಿಂದ ಅವರಿಗೆ ನಿತ್ಯ ಸಂಜೆ ವೇಳೆಗೆ ಟೈಲರಿಂಗ್, ಎಂಬ್ರಾಯಿಡರಿ ಮುಂತಾದವುಗಳನ್ನು ಕಲಿಸಿಕೊಡಲಾಗುತ್ತದೆ. ಇವರೇ ತಯಾರಿಸಿದ ಎಂಬ್ರಾಯಿಡರಿ ಉತ್ಪನ್ನಗಳು ದೆಹಲಿಯ ಮುಖ್ಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತವೆ. ಆ ಸಂಪಾದನೆ ಅವರಿಗೇ. 

"
"No social progress can happen without educating women'' ಅಂತಾರೆ. ವಿರೇಂದ್ರ ಸಿಂಗ್ ಅವರು ಈ ಮಾತನ್ನು ನಿಜವಾಗಿಸ ಹೊರಟಿದ್ದಾರೆ. ಶಿಕ್ಷಣದ ಅಭಿವೃದ್ಧಿಗಾಗಿ ಸರ್ಕಾರಗಳು ಮಧ್ಯಾಹ್ನದ ಊಟ ನೀಡುತ್ತಾರೆ, ಸೈಕಲ್ ನೀಡುತ್ತಾರೆ. ಆದರೆ, ನಮ್ಮಲ್ಲಿ ಮಧ್ಯಾಹ್ನದ ಊಟವನ್ನೂ, ಸರ್ಕಾರಗಳು ನೀಡುವ ಸೈಕಲ್ಲನ್ನೂ ಕದಿಯುವ ಖದೀಮರಿದ್ದಾರೆ. ಆದರೆ, ರೇಂದ್ರ ಸಿಂಗ್  ಅವರಂಥವರ ಕನಸುಗಳನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ!!



ಪ್ರಕಟ: http://www.hosadigantha.in/epaper.php?date=11-04-2010&name=11-04-2010-7

Thursday, December 30, 2010

ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ

ನ್ನ ಕಳೆದೆರಡು ಅಂಕಣದಲ್ಲಿ  ಅನ್ಯಾಯದ ಕುಲುಮೆಯಲ್ಲಿ ಬೆಂದ ಹೆಣ್ಣು ಮಕ್ಕಳಿಬ್ಬರ ಕಥೆ ಹೇಳಿದ್ದೆ. ಈಗ  ಮತ್ತೊಂದು ಕಥೆ ಹೇಳುತ್ತಿದ್ದೇನೆ. ಹೆಣ್ಣು ಮುಂದುವರಿದರೂ ಆಕೆಯ ಮೇಲಿನ ಅನ್ಯಾಯಗಳಿನ್ನೂ ಕೊನೆಯಾಗಲಿಲ್ಲ. ಈಕೆಯ ಹೆಸರು ಸುಲೇಖಾ ಮಹಿಪಾಲ್ . ಊರು ಡೆಹ್ರಾಡೂನ್. ಹುಟ್ಟಿದ್ದು ಜಾಡಮಾಲಿ ಕುಟುಂಬದಲ್ಲಿ. ಅಪ್ಪ ಅಮ್ಮನನ್ನು ವಿಷ ನೀಡಿ ಕೊಂದಾಗ ಸುಲೇಖಾಳಿಗೆ ಇನ್ನೂ ೧೩ ವರ್ಷ. ಅಪ್ಪನಿಂದ ದೂರಾದ ಸುಲೇಖಾಳ ಬದುಕು ಪ್ರತಿಕ್ಷಣವೂ ಶೋಷಣೆಗೊಳಗಾಯಿತು. ಭರವಸೆ ಕಳೆದುಕೊಂಡ ಅವಳ ಬದುಕಿನಲ್ಲಿ ಮತ್ತೆ ಭರವಸೆ ತುಂಬಿದ್ದು  ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಮತ್ತು ತನ್ನ  ಭಾ ಪತಿ. ಈಗ ಅನ್ಯಾಯದ ವಿರುದ್ಧ ಸುಲೇಖಾ ಹೋರಾಟಕ್ಕೆ ಭಾ ಪತಿಯೂ ಕೈ ಜೋಡಿಸಿದ್ದಾರೆ. 



ಅಮ್ಮನನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಅಪ್ಪನ ರೌದ್ರವತಾರೆದುರು ಮಗಳು ಅಸಹಾಯಕಳಾಗಿ ಮೌನವಾಗಿದ್ದಳು. ಆಕೆಗಿನ್ನೂ ೧೩ ವರ್ಷ. ಆ ಪುಟ್ಟ ಹೆಣ್ಣು ಮಗಳ ಎದುರು ಅಮ್ಮ ಹತಳಾದಳು.
ಆ ದಿನ ಆತ ತನ್ನ ಪತ್ನಿಗೆ ವಿಷ ಕುಡಿಸಲು ಒಂದೇ ಸಮನೆ ಒತ್ತಾಯಿಸುತ್ತಿದ್ದ. ಆಕೆ ಒಪ್ಪಲಿಲ್ಲ. ಒಪ್ಪದಿದ್ದಾಗ ಬಾಸುಂಡೆಗಳು ಬರುವಂತೆ ಹೊಡೆದ. ಕೊನೆಗೆ ಕುಡಿದೇ ಬಿಟ್ಟಳು. ವಿಷ ಕುಡಿದ ಎರಡೇ ಗಂಟೆಗಳಲ್ಲಿ ಆ ತಾಯಿ ಅಸುನೀಗಿದಳು. ಆ ಮನುಷ್ಯ ಊರಲೆಲ್ಲಾ ತನ್ನ "ಪತ್ನಿ ಆತ್ಮಹತ್ಯೆ ಮಾಡಿಕೊಂಡಳೆಂದು'' ಡಂಗುರ ಸಾರಿದ. ಅಕ್ಕಪಕ್ಕದವರೆಲ್ಲಾ ಅಹುದಹುದೆಂದರು! ಅಪ್ಪನ ಕ್ರೌರ್ಯಕ್ಕೆ ಆ ಹೆಣ್ಣು ಮಗಳು ಮೂಕಸಾಕ್ಷಿಯಾಗಿದ್ದಳು.

 ಆ ಹೆಣ್ಣು ಮಗುವೇ ಇಂದು ಡೆಹ್ರಾಡೂನ್‌ನ ಖಾಸಗಿ ಕಾಲೇಜೊಂದರಲ್ಲಿ ಕಾನೂನು ಪದವಿ ಓದುತ್ತಿರುವ ಮತ್ತು ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ನೂರಾರು ಹೆಣ್ಣುಮಗಳಿಗೆ ಆಸರೆಯಾಗುತ್ತಿರುವ ಸುಲೇಖಾ ಮಹಿಪಾಲ್.

ಸುಲೇಖಾ ಅವರದು ಜಾಡಮಾಲಿ ಕುಟುಂಬ. ಅಪ್ಪನಿಗೆ ಬೇರೊಬ್ಬಳೊಂದಿಗೆ ಜೊತೆ ಸಂಬಂಧವಿತ್ತು. ಅದೇ ಕಾರಣಕ್ಕಾಗಿ ಆತ ಸುಲೇಖಾಳ ಅಮ್ಮನನ್ನು  ಕೊಂದ. ಅಲ್ಲಿಂದ ಸುಲೇಖಾ ಸಾಗಿದ್ದು ಹರಿಯಾಣದಲ್ಲಿರುವ ತನ್ನ ಅಜ್ಜನ ಮನೆಗೆ. ಅಂದರೆ, ಅವಳ ಅಮ್ಮನ ಅಪ್ಪನ ಮನೆಗೆ. ಅಜ್ಜನ ಮನೆಯಲ್ಲೇ ಪ್ರಾಥಮಿಕ ಶಿಕ್ಷಣವೂ ಆಯಿತು. ಆದರೆ, ಸುಲೇಖಾ ಬದುಕು ಅಲ್ಲಿ 'ಗುರಿ' ತಲುಪಲಿಲ್ಲ.  ಮರಳಿ ಅಪ್ಪನ ಹುಡುಕಿ ಬಂದಳು. ಯಾರೂ ಇಲ್ಲದ ಬದುಕಿಗೆ ಮತ್ತೆ ಅಪ್ಪ ಬೇಕಾದ. ಮಲತಾಯಿ ಬೇಕಾದಳು. ತನ್ನ ಒಡಹುಟ್ಟಿದ ತಮ್ಮಂದಿರ ಬದುಕು ನೋಡಬೇಕಾಯಿತು. ಅಪ್ಪ ಬಹಳ ದಿನ ಆಸರೆಯಾಗಲಿಲ್ಲ. "ಬೆಳಕು ಹುಡುಕಿ ಬಂದ ದಾರಿಯಲ್ಲಿ ಬೆಳಕಿರಲಿಲ್ಲ''

ಅಂದು ಏಪ್ರಿಲ್ ೧೮, ೨೦೦೮.

ಯಾರದೋ ಮಾತು ಕೇಳಿ ಸರ್ಕಾರ ಸಂಸ್ಥೆಯೊಂದರಲ್ಲಿ ಕೆಲಸ ಹುಡುಕಿ ಹೊರಟಳು. ಆದರೆ, ಅಲ್ಲಿ ನಡೆದಿದ್ದು ಮಹಾ ದುರಂತ. ತಂದೆ ಇದ್ದೂ ಆಕೆಗಿಲ್ಲ, ತಾಯಿ ಅಪ್ಪನಾದವನ ಕ್ರೌರ್ಯಕ್ಕೆ ಬಲಿಯಾದಳು. ತಮ್ಮಂದಿರು ಅವರ ದಾರಿ ಹಿಡಿದಿದ್ದರು. ಸುಲೇಖಾ ಸುತ್ತ  ಬದುಕಿನ ಸಂಬಂಧಗಳೇ ಇರಲಿಲ್ಲ. ಸರ್ಕಾರಿ ಕಚೇರಿಯೊಂದಕ್ಕೆ ಸಂದರ್ಶನಕ್ಕೆಂದು ಹೋದಾಗ ಅದೇ ಸ್ಥಳದಲ್ಲಿ ತನ್ನ ಕಸಿನ್ ಸೇರಿದಂತೆ ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾದಳು! ಅಷ್ಟಕ್ಕೇ ನಿಲ್ಲಲಿಲ್ಲ. ಆ ದೃಶ್ಯವನ್ನು ವಿಡಿಯೋ ಟೇಪ್ ಮಾಡಿದರು. ಆ ಶಾಕ್‌ನಿಂದ ಹೊರಬರಲು ಅವಳಿಗೆ ದಿನ ತಿಂಗಳುಗಳೇ ಬೇಕಾದವು.

ಅಪ್ಪನೇ ಮಗಳನ್ನು ಹೊರದೂಡಿದ!
ಆ ಕ್ಷಣ ಅವಳಿಗೆ ನೆನಪಾಗಿದ್ದು ಜನ್ಮ ಕೊಟ್ಟ ಅಪ್ಪ. ಬಿಕ್ಕುತ್ತಾ ತನ್ನ ಕಥೆಯನ್ನು ಅಪ್ಪನೆದುರು ಹೇಳಿದಳು. ಒಂದಷ್ಟು ಹೊತ್ತು ಅಲ್ಲಿ ನಿಲ್ಲಲು ಅವಳಿಗೆ ಅವಕಾಶವಿರಲಿಲ್ಲ. ಸತ್ಯಕ್ಕೆ, ನ್ಯಾಯಕ್ಕೆ ಬೆಲೆ ಇರಲಿಲ್ಲ. ಯಾರದ್ದೋ ತಪ್ಪು, ಅಪ್ಪನೆದುರು ಮಗಳು ಅಪರಾಧಿಯಾದಳು.  ಆತನೂ ಪುರುಷನೇ! ಏಕ್ ದಂ ಮಗಳನ್ನು ಹೊರಗೆ ದೂಡಿದ.

ಮನೆ ತೊರೆದು ಹೊರಟ ಸುಲೇಖಾಗೆ ಕಣ್ಣಿಗೆ ಬಿದ್ದಿದ್ದು  ಡೆಹ್ರಾಡೂನ್ ನಗರದಲ್ಲಿ  ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ  ಹಾಕಿದ್ದ ದೊಡ್ಡ ಬೋರ್ಡು. ಅಲ್ಲಿ ಸಹಾಯವಾಣಿ ನಂ ಬರೆಯಲಾಗಿತ್ತು. ಅದನ್ನೇ ಸುಲೇಖಾ ಹೇಳುವುದು ಹೀಗೆ: “ಅಪ್ಪ ಮನೆಯಿಂದ ಹೊರ ಹಾಕಿದ. ಭರವಸೆ ಹುಡುಕಿ ಅಜ್ಜನ ಮನೆಗೆ ಹೋದೆ. ಅಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ನಡೆದಾಡುವ ಸ್ಥಿತಿ ಇರಲಿಲ್ಲ. ಅಲ್ಲಿಂದ ತಮ್ಮಂದಿರಿಗಾಗಿ ಮತ್ತೆ ಅಪ್ಪನ ಮನೆಗೆ ಬಂದೆ. ಆಗ ಸಣ್ಣ ಭರವಸೆ ಇತ್ತು. ಆದರೆ, ನಂತರ ನಡೆದ ಘಟನೆಗಳಿಂದಾಗಿ ಒಂಚೂರು ಭರವಸೆಯೂ ನನ್ನಲ್ಲಿ ಉಳಿದಿಲ್ಲ. ಆದರೆ, ಆ ದೊಡ್ಡ ಬೋರ್ಡ್ ನೋಡಿ ಮತ್ತೆ ಬದುಕುವ ಆಸೆ ಹುಟ್ಟಿತು. ತಕ್ಷಣ ನಾನು ಆ ಸಂಸ್ಥೆಗೆ ಭೇಟಿ ನೀಡಿ ನನಗೆ ನೆರವಾಗಲು ಬೇಡಿಕೊಂಡೆ” ಅದರಂತೆ ಸಮಾಧಾನ ಸಂಸ್ಥೆ ಆಕೆಗೆ ನೆರವಾಯಿತು. ಈಗ ಆಕೆ ತನ್ನ ವಿರುದ್ಧ ನಡೆದ ಅನ್ಯಾಯಗಳ ವಿರುದ್ಧ ಕೋರ್ಟ್ ಹತ್ತಿದ್ದಾಳೆ.  
 ಆದರ್ಶ ಪತಿರಾಯ
ಇದಕ್ಕೆ ಅವಳಿಗೆ ನೆರವಾಗಿತ್ತು ಅವಳ ಭಾ ಪತಿ. ಅಚ್ಚರಿ ಎಂದರೆ, ಹೆಂಡತಿ ಬೇರೊಬ್ಬ ಗಂಡನೊಂದಿಗೆ ಮಾತನಾಡಿದರೆ ಅಥವಾ ತನ್ನ ಹೆಂಡತಿ ಪರ ಪುರುಷನಿಂದ ಅತ್ಯಾಚಾರಗೊಳಗಾದರೆ ಯಾವ ಗಂಡನೂ ಸಹಿಸುವುದು ಕಷ್ಟವೇ. ಇಂಥ ಪ್ರಕರಣಗಳಿಗಾಗಿ ವಿಚ್ಚೇದನ ನೀಡಿದ ಅದೆಷ್ಟೋ ಗಂಡಸರನ್ನು ನಾವು ನೋಡಿದ್ದೇವೆ. ಆದರೆ, ಈತ ಹಾಗೇ ಮಾಡಲಿಲ್ಲ. ಸುಲೇಖಾಳ ಬದುಕಿನ ಪ್ರತಿ ಹೋರಾಟಗಳಿಗೂ ಧೈರ್ಯ ತುಂಬುತ್ತಿದ್ದಾನೆ. ಆತನೂ ಎಂಬಿಎ ವಿದಾರ್ಥಿ. ಒಂದು ರೀತಿಯಲ್ಲಿ ಆದರ್ಶ ಪತಿ. ಸದ್ಯದಲ್ಲೇ ಸುಲೇಖಾ ಆತನ ಜೊತೆ ಸಪ್ತಪದಿ ತುಳಿಯಳಿದ್ದಾಳೆ.

ಮತ್ತೆ ಭರವಸೆ ಹುಟ್ಟಿದೆ
""ನನ್ನಂಥವರು ಈ ದೇಶದಲ್ಲಿ ಸಾಕಷ್ಟು ಹೆಣ್ಣು ಮಕ್ಕಳಿರಬಹುದು. ಇಂಥ ಅನುಭವಗಳು ನಮ್ಮ ದೇಶದಲ್ಲಿ ಸಾಮಾನ್ಯ. ಹಾಗಂತ ನನ್ನ  ಸುತ್ತ ಇರುವ ಅಪ್ಪ, ತಮ್ಮ...ಮುಂತಾದ ಸಂಬಂಧಗಳಿಂದ ಕಳಚಿಕೊಂಡು ದೂರ ಇರಬೇಕು ಅಂತ ಅನಿಸುವುದೇ ಇಲ್ಲ. ಅವರಿಗೆ ನನ್ನ ಬಗ್ಗೆ ಏನೇ ಅಭಿಪ್ರಾಯಗಳಿರಬಹುದು. ಆದರೆ ಅವರು ನನ್ನ ಬದುಕಿನ ಭಾಗ'' ಎನ್ನುವ ಸುಲೇಖಾ, ತನ್ನ ಪತಿಯ ಕುರಿತು ಹೆಮ್ಮೆಯಿಂದ ನುಡಿಯುವುದು ಹೀಗೆ: “೧೩ ವರ್ಷದಿಂದ ಈವರೆಗೆ ನಾನು ಕಂಡಿದ್ದು ಬರೇ ನೋವುಗಳೇ. ಅದು ಬರೇ ಪುರುಷನಿಂದಲೇ ನನ್ನ ಬದುಕು ಅನ್ಯಾಯಗೊಳಗಾಗಿತ್ತು. ಪುರುಷರ ಕುರಿತೇ ನಂಬಿಕೆ ಕಳೆದುಕೊಂಡಿದ್ದೆ. ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೆ, ಯಾವಾಗ ನನ್ನನ್ನು ಮದುವೆಗೆ ಒಪ್ಪಿದ್ದಾರೋ ಅಂದಿನಿಂದ ನನ್ನಲ್ಲಿ ಭರವಸೆ ಹುಟ್ಟಿದೆ. ಸದ್ಯದಲ್ಲೇ ನಮ್ಮ ಮದುವೆ. ಆದರೆ, ಅನ್ಯಾಯದ ವಿರುದ್ಧ  ನಮ್ಮ ಹೋರಾಟ ನಿಲ್ಲುವುದಿಲ್ಲ” ಎನ್ನುವ ಗಟ್ಟಿಮಾತು.

ಇಂದು ಸಮಾಧಾನದಲ್ಲಿ ತನ್ನಂತೆ ನೊಂದ ನೂರಾರು ಹೆಣ್ಣು ಮಕ್ಕಳಿಗೆ ಸುಲೇಖಾ ಆಸರೆಯಾಗುತ್ತಿದ್ದಾಳೆ. ಬದುಕಿನಲ್ಲಿ ಕಂಡ ಕಷ್ಟಗಳು ಅವಳ ಬದುಕನ್ನು ರೂಪಿಸಿವೆ.  ಅನ್ಯಾಯದ ಎದುರು ಬದುಕು ಬೆತ್ತಲಾದರೂ ಅವಳು ಧೃತಿಗೆಡಲಿಲ್ಲ. ಅವಳೆದುರು ಸಹಾಯ ಹಸ್ತ ಚಾಚಿ ಬಂದವರಿಗೆ ಅವಳು ಹೇಳೋದಷ್ಟೇ: ಗಂಡಸರ ಗರಡಿಯಲ್ಲಿ  ‘ಕಳೆದು’ಹೋದರೂ, ಬದುಕಿನಲ್ಲಿ ಆಶಾವಾದಗಳಿರಲಿ”. ಸುಲೇಖಾ ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು!
ಪ್ರಕಟ: http://www.hosadigantha.in/epaper.php?date=12-30-2010&name=12-30-2010-7

Monday, December 27, 2010

ಕ್ಷಮಿಸಿ,ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ!

ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ.
ಆನೆ, ಹುಲಿ, ಸಿಂಹಗಳ ಅಂಗಾಂಗಳನ್ನು  ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ. ಆದರೆ, ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ...ನೋಡುವುದು ಬಿಡಿ, ಕೇಳಲು ಅಸಹ್ಯವಾಗುತ್ತದೆ. ಆದರೆ, ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು. ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ.

                              *****
ನನ್ನ ಹೆಸರು ಸಾರಾ. ಹುಟ್ಟಿದ್ದು ೧೭೮೯ರಲ್ಲಿ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ. ನಾನು ಎದ್ದು ನಡೆಯುವ ಹೊತ್ತಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದೆ. ಅವರು ಬಲಿಯಾಗಿದ್ದೂ ಬಡತನಕ್ಕೇ! ಇಂದು ನನ್ನೆದುರು ಅವರ ಮುಖವೂ ಅಸ್ಪಷ್ಟ. ಹಿಂದೆ-ಮುಂದೆ ಯಾರಿಲ್ಲ. ಒಬ್ಬಳೇ ಮಗಳು. ಒಂದಷ್ಟು ದಿನ ಸಂಬಂಧಿಕರ ಆಶ್ರಯದಲ್ಲಿ ಬೆಳೆದೆ. ಆದರೂ, ಅಲ್ಲಿ ನನ್ನ ಬದುಕಿರಲಿಲ್ಲ. ನಮ್ಮೂರಿನ ಪಕ್ಕದ ಡಚ್ ರೈತರ ಮನೆಯಲ್ಲಿ ಜೀತದಾಳಾಗಿ ಸೇರಿಕೊಂಡೆ. ಆಗಿನ್ನೂ ಹರೆಯಕ್ಕೆ ಬಂದ ವಯಸ್ಸು ಜಗತ್ತಿನ ಆಗುಹೋಗುಗಳನ್ನು ತಿಳಿಯಬಲ್ಲವಳಾಗಿದ್ದೆ. ಬಿಳಿಯರು ನಮ್ಮ ಜನಾಂಗದ ವಿರುದ್ಧ ನಡೆಸುತ್ತಿದ್ದ ಅನ್ಯಾಯಗಳ ಕುರಿತು ಕೇಳಿದ್ದೆ. ಎಲ್ಲವೂ ನನ್ನೊಡಲಲ್ಲಿ ಮೌನವಾಗಿದ್ದವು.


ಬೀದಿ-ಬೀದಿಯಲ್ಲಿ ಬೆತ್ತಲಾದೆ!
ಆ ಡಚ್ ರೈತರ ಮನೆಯಲ್ಲಿ ನಿತ್ಯವೂ ಬೆನ್ನು ಬಗ್ಗಿಸಿ ದುಡಿಯಬೇಕು. ಹೊತ್ತಲ್ಲದ ಹೊತ್ತಿನಲ್ಲಿ ಹೊಟ್ಟೆಗೆ ತುತ್ತು. ಭವಿಷ್ಯಕ್ಕೆ ಸಂಪಾದನೆಯ ದಾರಿ ಬೇಕಿತ್ತು. ಯಾರೋ ಲಂಡನ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿದಾಗ ಸರಿ ಎನಿಸಿತ್ತು. ಆಗ ನನಗೆ ೨೧ ವರ್ಷ. ಹಿಡಿ ಕನಸುಗಳೊಂದಿಗೆ ಲಂಡನ್‌ಗೆ ಬಂದಿಳಿದಿದ್ದೆ! ಅಲ್ಲಿನ ಸರ್ಕಸ್ ಕಂಪನಿಯೊಂದರಲ್ಲಿ ನನ್ನ ಬರಮಾಡಿಕೊಂಡರು. ಆಗ ಅಲ್ಲಿ ಅವರು ನೀಡಿದ್ದ ಆಫರ್ ಕೇಳಿ ಕಂಪಿಸಿದೆ. "ಆ ಸರ್ಕಸ್‌ನಲ್ಲಿ  ನಾನು ಬೆತ್ತಲೆಯಾಗಿ ಪ್ರದರ್ಶನ ನೀಡಬೇಕಿತ್ತು''. ಬಿಳಿಯರ ದರ್ಬಾರಿನ ಎದುರು ನನ್ನ ಮಾತುಗಳಿಗೆ ಬೆಲೆ ಇರಲಿಲ್ಲ. ನಾನೊಲ್ಲೆ ಎಂದಾಗ ಬೆನ್ನಿನಲ್ಲಿ ಬಾಸುಂಡೆಗಳು ಮೂಡಿದವು. ಲಂಡನ್‌ನ ಬೀದಿ-ಬೀದಿಗಳಲ್ಲಿ ಬೆತ್ತಲೆಯಾದೆ. ಅವರು ಹೇಳಿದಂತೆ ನನ್ನ ಕೆಲಸ. ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು...ಅದೂ ಕಪ್ಪು ಜನಾಂಗದಲ್ಲಿ! 

ವ್ಯತ್ಯಾಸ ಬಣ್ಣ ಮಾತ್ರ!

ಇಷ್ಟಕ್ಕೇ ಮುಗಿಯಲಿಲ್ಲ. ನನ್ನೆಲ್ಲಾ ಪ್ರತಿರೋಧದ ನಡುವೆ ನನ್ನನ್ನು ಒಂದು ಪಂಜರದೊಳಗೆ ಕೂಡಿಟ್ಟು  ಬೆತ್ತಲೆಯಾಗಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟರು. ನಿತ್ಯ  ನೂರಾರು ಬಿಳಿಯರು ನೋಡಿ ಖುಷಿಪಡುತ್ತಿದ್ದರು. ನನ್ನ ನೋಡಲು ಟಿಕೆಟ್‌ಗಾಗಿ ಕ್ಯೂ ನಿಂತಿರುವುದನ್ನು ನೋಡಿ ಆ ಅನ್ಯಾಯದ ಪಂಜರದೊಳಗೆ ಹಾಕಿದ ಕಣ್ಣೀರು ಅಲ್ಲೇ ಬಂಧಿಯಾಗಿತ್ತು. ಕೇವಲ ಗಂಡಸರು ಮಾತ್ರವಲ್ಲ, ನನ್ನಂಥ ಹೆಣ್ಣು ಮನಸ್ಸುಗಳು ಅಲ್ಲಿದ್ದರು. ಆದರೆ ಅವರಿಗೂ ನನಗೂ ಮೇಲ್ನೋಟಕ್ಕೆ ಕಾಣುತ್ತಿದ್ದ  ವ್ಯತ್ಯಾಸ ಬಣ್ಣ ಮಾತ್ರ! ಅವರೂ ಬಟ್ಟೆ  ತೊಟ್ಟ ನಗ್ನರೇ! ಅದೇ ಪಂಜರದ ಸರಳುಗಳನ್ನು ಹಿಡಿದು ನಗ್ನತೆ ಮುಚ್ಚಲು ಅಹೋರಾತ್ರಿ ವ್ಯರ್ಥ ಹೋರಾಟ...ಚೀರಾಟ! ಎಲ್ಲಾ ಮುಗಿದು ಕೊನೆಗೆ ಮಿಕ್ಕಿದ್ದು ಅವಡಗಚ್ಚುವ ಮೌನ ಮಾತ್ರ!

ಅದೇ ಪಂಜರದಲ್ಲಿ ಪ್ರದರ್ಶನ
...
ಸಣ್ಣ ಬಣ್ಣ, ರೂಪ, ಆ ವಿಚಿತ್ರವಾದ ನೆರಿಗೆಯಿರುವ ಕೂದಲುಗಳನ್ನೇ ದುಡ್ಡಿನ ಬಂಡವಾಳವನ್ನಾಗಿಸಿಕೊಂಡ ಬಿಳಿಯರ ಗುಟ್ಟು ರಟ್ಟಾಗುತ್ತಿದ್ದಂತೆ, ನನ್ನನ್ನು ಫ್ರಾನ್ಸ್‌ಗೆ ಕಳುಹಿಸಲಾಗಿತ್ತು. ಮನಸ್ಸಿನಲ್ಲಿ ಪುಟ್ಟದೊಂದು ಆಸೆ ಚಿಗುರಿತ್ತು ಬಿಡುಗಡೆಯ ಆಸೆಯಿಂದ! ಆದರೆ, ಅಲ್ಲಿಯೂ ಅದೇ ಬದುಕಾಯಿತು. ಪದೇ ಪದೇ ಅತ್ಯಾಚಾರಕ್ಕೊಳಗಾದೆ, ವೇಶ್ಯೆಯಾದೆ. ಅಲಿಯೂ ಅದೇ ಪಂಜರ...ಅದೇ ಯಾರದ್ದೋ ಆಸೆಗೆ ನಾನು ಬೆತ್ತಲಾಗುವುದು! ನನ್ನ ಪುಟ್ಟ ಆಸೆಯೂ ಕಮರಿಹೋಗಿದೆ. ಇಲ್ಲಿ ಆಸೆಯೂ ಇಲ್ಲ, ಆಸರೆಯೂ ಇಲ್ಲ.

ಆಗ ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ. ಬಹುಶಃ ಅದೊಂದೇ ನನ್ನ ಜೀವನದಲ್ಲಿ ಕೊನೆಯವರೆಗೂ ಸಾಥ್ ನೀಡಿದ್ದು.
ನನ್ನ ಸಾವು ಸಮೀಪಿಸುತ್ತಿದೆ. ಕಪ್ಪು ಜನಾಂಗದ ಹೆಣ್ಣುಮಗಳಾಗಿ ಹುಟ್ಟಿದ್ದೇ ದೊಡ್ಡ ತಪ್ಪಾಯಿತು. ಸಣ್ಣವಳಿರುವಾಗ ಅಲ್ಲಿ-ಇಲ್ಲಿ ಕೇಳಿದ ವರ್ಣಭೇದ ನೀತಿ ಇಂದು ನಿಜವಾಗುತ್ತಿದೆ. ನೀವು ಹೆಣ್ಣು ಮಕ್ಕಳಾಗಿದ್ದರೆ ಅನ್ಯಾಯದ ವಿರುದ್ಧ  ಸೆಟೆದು ನಿಲ್ಲುವ ಶಕ್ತಿ ಇರಲಿ. ನನ್ನಿಂದಾಗದು ನಿಮ್ಮಿಂದಾಗಲಿ..

***********

ಇದು ನಿಜ ಕಥೆ. ಸಾರಾ ಸಾಯುವ ಕೊನೆಯ ಗಳಿಗೆಯಲ್ಲಿ ದಾಖಲೆಯಾಗಿಟ್ಟ ನುಡಿಗಳಿವು. ಸಾರಾಳ ಬದುಕು ಅಲ್ಲಿಗೇ ಕೊನೆಯಾಗಲಿಲ್ಲ. ಲಂಡನ್ ಮತ್ತು ಫ್ರಾನ್ಸ್‌ನ ಜನರು ಇವಳ ಮೇಲೆ ಯಾವ ಕನಿಕರವನ್ನೂ ತೋರಲಿಲ್ಲ. ಫ್ರಾನ್ಸ್‌ನಲ್ಲಿ ಅವಳ ಸಾವಾದಾಗ ಅವಳಿಗೆ ೨೫ನೇ ವಯಸ್ಸು.ಆದರೆ, ಸತ್ತ ಮೇಲೂ ಅವರು ಅವಳನ್ನು ಬಿಡಲಿಲ್ಲ. ಅವಳ ಮೂಳೆಗಳನ್ನು ಮತ್ತು ಜನನೇಂದ್ರಿಯಗಳನ್ನು  ಪ್ಯಾರೀಸ್‌ನ "ಮ್ಯೂಸಿ ದೆ ಐ ಹೆಮ್ಮೆ' ಎಂಬ ಸ್ಥಳದಲ್ಲಿ ಪ್ರದರ್ಶನಕ್ಕಿಟ್ಟರು. ಎರಡು ದಶಕಗಳಿಗೂ ಹೆಚ್ಚು ಕಾಲ ಸಾರಾಳ ದೇಹದ ಅಂಗಾಂಗಗಳನ್ನು ಈ ಮ್ಯೂಸಿಯಂನಲ್ಲಿ ಇಟ್ಟು ಖುಷಿಪಡುತ್ತಾರೆ.  ಕೋಟಿಗಟ್ಟಲೆ ಬಿಳಿಯ ಕ್ಷಕರು ದುಡ್ಡು ಕೊಟ್ಟು  ನೋಡಿ ಖುಷಿಪಟ್ಟರು.ಯಾರಿಗೂ ಅದು ಅಸಹ್ಯ ಅನಿಸಲೇ ಇಲ್ಲ.  ೨೦೦೨ರಲ್ಲಿ ಸಾರಾಳಿಗೆ ಫ್ರಾನ್ಸ್‌ನಿಂದ ಬಿಡುಗಡೆ ಸಿಕ್ಕಿತ್ತು, ಅಲ್ಲಲ್ಲ  ಅವಳ ಅಸ್ಥಿಪಂಜರಕ್ಕೆ! ಅವಳ ಕುಟುಂಬದ ತಲೆಮಾರೊಂದು ಈ ವಿರುದ್ಧ ಕಾನೂನು ಹೋರಾಟ ನಡೆಸಿದ್ದರ ಪರಿಣಾಮ ಅವಳ ದೇಹವನ್ನು .ಮತ್ತೆ ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ.

*****

ಆಕಸ್ಮಿಕ, ಅನಿವಾರ್ಯ ಸಾವುಗಳು ಮನುಷ್ಯನಿಗೆ ಖಚಿತ. ಆದರೆ, ಇವಳ ಸಾವು ಅನಿವಾರ್ಯವೂ ಅಲ್ಲ, ಆಕಸ್ಮಿಕವೂ ಅಲ್ಲ. ಇದೊಂದು ವಿಚಿತ್ರ ಸಾವು, ವಿಚಿತ್ರವಾದ ಶೋಷಣೆ. ಇದು ಅನ್ಯಾಯದಿಂದ ಮಾಡಿದ ಸಾವು. ಅವಳ ಕಥೆ ಕೇಳಿದಾಗ ಹೀಗಾಗಬಾರದಿತ್ತು ಎಂದು ಮನಸ್ಸು ಮರುಕ ಪಡುತ್ತೆ. ನಮ್ಮ ಸುತ್ತಮುತ್ತಲೇ ದಾಖಲೆಯಾಗದ ಇಂಥ ಅದೆಷ್ಟೋ ಕಣ್ಣೀರ ಕಥೆ-ವ್ಯಥೆಗಳಿರಬಹುದು.

ಕ್ಷಮಿಸಿ, ಇದು ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ.