ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ.
ಆನೆ, ಹುಲಿ, ಸಿಂಹಗಳ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ. ಆದರೆ, ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ...ನೋಡುವುದು ಬಿಡಿ, ಕೇಳಲು ಅಸಹ್ಯವಾಗುತ್ತದೆ. ಆದರೆ, ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು. ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ.
*****
ನನ್ನ ಹೆಸರು ಸಾರಾ. ಹುಟ್ಟಿದ್ದು ೧೭೮೯ರಲ್ಲಿ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ. ನಾನು ಎದ್ದು ನಡೆಯುವ ಹೊತ್ತಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದೆ. ಅವರು ಬಲಿಯಾಗಿದ್ದೂ ಬಡತನಕ್ಕೇ! ಇಂದು ನನ್ನೆದುರು ಅವರ ಮುಖವೂ ಅಸ್ಪಷ್ಟ. ಹಿಂದೆ-ಮುಂದೆ ಯಾರಿಲ್ಲ. ಒಬ್ಬಳೇ ಮಗಳು. ಒಂದಷ್ಟು ದಿನ ಸಂಬಂಧಿಕರ ಆಶ್ರಯದಲ್ಲಿ ಬೆಳೆದೆ. ಆದರೂ, ಅಲ್ಲಿ ನನ್ನ ಬದುಕಿರಲಿಲ್ಲ. ನಮ್ಮೂರಿನ ಪಕ್ಕದ ಡಚ್ ರೈತರ ಮನೆಯಲ್ಲಿ ಜೀತದಾಳಾಗಿ ಸೇರಿಕೊಂಡೆ. ಆಗಿನ್ನೂ ಹರೆಯಕ್ಕೆ ಬಂದ ವಯಸ್ಸು ಜಗತ್ತಿನ ಆಗುಹೋಗುಗಳನ್ನು ತಿಳಿಯಬಲ್ಲವಳಾಗಿದ್ದೆ. ಬಿಳಿಯರು ನಮ್ಮ ಜನಾಂಗದ ವಿರುದ್ಧ ನಡೆಸುತ್ತಿದ್ದ ಅನ್ಯಾಯಗಳ ಕುರಿತು ಕೇಳಿದ್ದೆ. ಎಲ್ಲವೂ ನನ್ನೊಡಲಲ್ಲಿ ಮೌನವಾಗಿದ್ದವು.
ಬೀದಿ-ಬೀದಿಯಲ್ಲಿ ಬೆತ್ತಲಾದೆ!
ಆ ಡಚ್ ರೈತರ ಮನೆಯಲ್ಲಿ ನಿತ್ಯವೂ ಬೆನ್ನು ಬಗ್ಗಿಸಿ ದುಡಿಯಬೇಕು. ಹೊತ್ತಲ್ಲದ ಹೊತ್ತಿನಲ್ಲಿ ಹೊಟ್ಟೆಗೆ ತುತ್ತು. ಭವಿಷ್ಯಕ್ಕೆ ಸಂಪಾದನೆಯ ದಾರಿ ಬೇಕಿತ್ತು. ಯಾರೋ ಲಂಡನ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿದಾಗ ಸರಿ ಎನಿಸಿತ್ತು. ಆಗ ನನಗೆ ೨೧ ವರ್ಷ. ಹಿಡಿ ಕನಸುಗಳೊಂದಿಗೆ ಲಂಡನ್‌ಗೆ ಬಂದಿಳಿದಿದ್ದೆ! ಅಲ್ಲಿನ ಸರ್ಕಸ್ ಕಂಪನಿಯೊಂದರಲ್ಲಿ ನನ್ನ ಬರಮಾಡಿಕೊಂಡರು. ಆಗ ಅಲ್ಲಿ ಅವರು ನೀಡಿದ್ದ ಆಫರ್ ಕೇಳಿ ಕಂಪಿಸಿದೆ. "ಆ ಸರ್ಕಸ್‌ನಲ್ಲಿ ನಾನು ಬೆತ್ತಲೆಯಾಗಿ ಪ್ರದರ್ಶನ ನೀಡಬೇಕಿತ್ತು''. ಬಿಳಿಯರ ದರ್ಬಾರಿನ ಎದುರು ನನ್ನ ಮಾತುಗಳಿಗೆ ಬೆಲೆ ಇರಲಿಲ್ಲ. ನಾನೊಲ್ಲೆ ಎಂದಾಗ ಬೆನ್ನಿನಲ್ಲಿ ಬಾಸುಂಡೆಗಳು ಮೂಡಿದವು. ಲಂಡನ್‌ನ ಬೀದಿ-ಬೀದಿಗಳಲ್ಲಿ ಬೆತ್ತಲೆಯಾದೆ. ಅವರು ಹೇಳಿದಂತೆ ನನ್ನ ಕೆಲಸ. ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು...ಅದೂ ಕಪ್ಪು ಜನಾಂಗದಲ್ಲಿ!
ವ್ಯತ್ಯಾಸ ಬಣ್ಣ ಮಾತ್ರ!
ಇಷ್ಟಕ್ಕೇ ಮುಗಿಯಲಿಲ್ಲ. ನನ್ನೆಲ್ಲಾ ಪ್ರತಿರೋಧದ ನಡುವೆ ನನ್ನನ್ನು ಒಂದು ಪಂಜರದೊಳಗೆ ಕೂಡಿಟ್ಟು ಬೆತ್ತಲೆಯಾಗಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟರು. ನಿತ್ಯ ನೂರಾರು ಬಿಳಿಯರು ನೋಡಿ ಖುಷಿಪಡುತ್ತಿದ್ದರು. ನನ್ನ ನೋಡಲು ಟಿಕೆಟ್‌ಗಾಗಿ ಕ್ಯೂ ನಿಂತಿರುವುದನ್ನು ನೋಡಿ ಆ ಅನ್ಯಾಯದ ಪಂಜರದೊಳಗೆ ಹಾಕಿದ ಕಣ್ಣೀರು ಅಲ್ಲೇ ಬಂಧಿಯಾಗಿತ್ತು. ಕೇವಲ ಗಂಡಸರು ಮಾತ್ರವಲ್ಲ, ನನ್ನಂಥ ಹೆಣ್ಣು ಮನಸ್ಸುಗಳು ಅಲ್ಲಿದ್ದರು. ಆದರೆ ಅವರಿಗೂ ನನಗೂ ಮೇಲ್ನೋಟಕ್ಕೆ ಕಾಣುತ್ತಿದ್ದ ವ್ಯತ್ಯಾಸ ಬಣ್ಣ ಮಾತ್ರ! ಅವರೂ ಬಟ್ಟೆ ತೊಟ್ಟ ನಗ್ನರೇ! ಅದೇ ಪಂಜರದ ಸರಳುಗಳನ್ನು ಹಿಡಿದು ನಗ್ನತೆ ಮುಚ್ಚಲು ಅಹೋರಾತ್ರಿ ವ್ಯರ್ಥ ಹೋರಾಟ...ಚೀರಾಟ! ಎಲ್ಲಾ ಮುಗಿದು ಕೊನೆಗೆ ಮಿಕ್ಕಿದ್ದು ಅವಡಗಚ್ಚುವ ಮೌನ ಮಾತ್ರ!
ಅದೇ ಪಂಜರದಲ್ಲಿ ಪ್ರದರ್ಶನ...
ಸಣ್ಣ ಬಣ್ಣ, ರೂಪ, ಆ ವಿಚಿತ್ರವಾದ ನೆರಿಗೆಯಿರುವ ಕೂದಲುಗಳನ್ನೇ ದುಡ್ಡಿನ ಬಂಡವಾಳವನ್ನಾಗಿಸಿಕೊಂಡ ಬಿಳಿಯರ ಗುಟ್ಟು ರಟ್ಟಾಗುತ್ತಿದ್ದಂತೆ, ನನ್ನನ್ನು ಫ್ರಾನ್ಸ್‌ಗೆ ಕಳುಹಿಸಲಾಗಿತ್ತು. ಮನಸ್ಸಿನಲ್ಲಿ ಪುಟ್ಟದೊಂದು ಆಸೆ ಚಿಗುರಿತ್ತು ಬಿಡುಗಡೆಯ ಆಸೆಯಿಂದ! ಆದರೆ, ಅಲ್ಲಿಯೂ ಅದೇ ಬದುಕಾಯಿತು. ಪದೇ ಪದೇ ಅತ್ಯಾಚಾರಕ್ಕೊಳಗಾದೆ, ವೇಶ್ಯೆಯಾದೆ. ಅಲಿಯೂ ಅದೇ ಪಂಜರ...ಅದೇ ಯಾರದ್ದೋ ಆಸೆಗೆ ನಾನು ಬೆತ್ತಲಾಗುವುದು! ನನ್ನ ಪುಟ್ಟ ಆಸೆಯೂ ಕಮರಿಹೋಗಿದೆ. ಇಲ್ಲಿ ಆಸೆಯೂ ಇಲ್ಲ, ಆಸರೆಯೂ ಇಲ್ಲ.
ಆಗ ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ. ಬಹುಶಃ ಅದೊಂದೇ ನನ್ನ ಜೀವನದಲ್ಲಿ ಕೊನೆಯವರೆಗೂ ಸಾಥ್ ನೀಡಿದ್ದು.
ನನ್ನ ಸಾವು ಸಮೀಪಿಸುತ್ತಿದೆ. ಕಪ್ಪು ಜನಾಂಗದ ಹೆಣ್ಣುಮಗಳಾಗಿ ಹುಟ್ಟಿದ್ದೇ ದೊಡ್ಡ ತಪ್ಪಾಯಿತು. ಸಣ್ಣವಳಿರುವಾಗ ಅಲ್ಲಿ-ಇಲ್ಲಿ ಕೇಳಿದ ವರ್ಣಭೇದ ನೀತಿ ಇಂದು ನಿಜವಾಗುತ್ತಿದೆ. ನೀವು ಹೆಣ್ಣು ಮಕ್ಕಳಾಗಿದ್ದರೆ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಇರಲಿ. ನನ್ನಿಂದಾಗದು ನಿಮ್ಮಿಂದಾಗಲಿ..
***********
ಇದು ನಿಜ ಕಥೆ. ಸಾರಾ ಸಾಯುವ ಕೊನೆಯ ಗಳಿಗೆಯಲ್ಲಿ ದಾಖಲೆಯಾಗಿಟ್ಟ ನುಡಿಗಳಿವು. ಸಾರಾಳ ಬದುಕು ಅಲ್ಲಿಗೇ ಕೊನೆಯಾಗಲಿಲ್ಲ. ಲಂಡನ್ ಮತ್ತು ಫ್ರಾನ್ಸ್‌ನ ಜನರು ಇವಳ ಮೇಲೆ ಯಾವ ಕನಿಕರವನ್ನೂ ತೋರಲಿಲ್ಲ. ಫ್ರಾನ್ಸ್‌ನಲ್ಲಿ ಅವಳ ಸಾವಾದಾಗ ಅವಳಿಗೆ ೨೫ನೇ ವಯಸ್ಸು.ಆದರೆ, ಸತ್ತ ಮೇಲೂ ಅವರು ಅವಳನ್ನು ಬಿಡಲಿಲ್ಲ. ಅವಳ ಮೂಳೆಗಳನ್ನು ಮತ್ತು ಜನನೇಂದ್ರಿಯಗಳನ್ನು ಪ್ಯಾರೀಸ್‌ನ "ಮ್ಯೂಸಿ ದೆ ಐ ಹೆಮ್ಮೆ' ಎಂಬ ಸ್ಥಳದಲ್ಲಿ ಪ್ರದರ್ಶನಕ್ಕಿಟ್ಟರು. ಎರಡು ದಶಕಗಳಿಗೂ ಹೆಚ್ಚು ಕಾಲ ಸಾರಾಳ ದೇಹದ ಅಂಗಾಂಗಗಳನ್ನು ಈ ಮ್ಯೂಸಿಯಂನಲ್ಲಿ ಇಟ್ಟು ಖುಷಿಪಡುತ್ತಾರೆ. ಕೋಟಿಗಟ್ಟಲೆ ಬಿಳಿಯ ಕ್ಷಕರು ದುಡ್ಡು ಕೊಟ್ಟು ನೋಡಿ ಖುಷಿಪಟ್ಟರು.ಯಾರಿಗೂ ಅದು ಅಸಹ್ಯ ಅನಿಸಲೇ ಇಲ್ಲ. ೨೦೦೨ರಲ್ಲಿ ಸಾರಾಳಿಗೆ ಫ್ರಾನ್ಸ್‌ನಿಂದ ಬಿಡುಗಡೆ ಸಿಕ್ಕಿತ್ತು, ಅಲ್ಲಲ್ಲ ಅವಳ ಅಸ್ಥಿಪಂಜರಕ್ಕೆ! ಅವಳ ಕುಟುಂಬದ ತಲೆಮಾರೊಂದು ಈ ವಿರುದ್ಧ ಕಾನೂನು ಹೋರಾಟ ನಡೆಸಿದ್ದರ ಪರಿಣಾಮ ಅವಳ ದೇಹವನ್ನು .ಮತ್ತೆ ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ.
*****
ಆಕಸ್ಮಿಕ, ಅನಿವಾರ್ಯ ಸಾವುಗಳು ಮನುಷ್ಯನಿಗೆ ಖಚಿತ. ಆದರೆ, ಇವಳ ಸಾವು ಅನಿವಾರ್ಯವೂ ಅಲ್ಲ, ಆಕಸ್ಮಿಕವೂ ಅಲ್ಲ. ಇದೊಂದು ವಿಚಿತ್ರ ಸಾವು, ವಿಚಿತ್ರವಾದ ಶೋಷಣೆ. ಇದು ಅನ್ಯಾಯದಿಂದ ಮಾಡಿದ ಸಾವು. ಅವಳ ಕಥೆ ಕೇಳಿದಾಗ ಹೀಗಾಗಬಾರದಿತ್ತು ಎಂದು ಮನಸ್ಸು ಮರುಕ ಪಡುತ್ತೆ. ನಮ್ಮ ಸುತ್ತಮುತ್ತಲೇ ದಾಖಲೆಯಾಗದ ಇಂಥ ಅದೆಷ್ಟೋ ಕಣ್ಣೀರ ಕಥೆ-ವ್ಯಥೆಗಳಿರಬಹುದು.
ಕ್ಷಮಿಸಿ, ಇದು ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ.
No comments:
Post a Comment