ನನ್ನ ಕಳೆದೆರಡು ಅಂಕಣದಲ್ಲಿ ಅನ್ಯಾಯದ ಕುಲುಮೆಯಲ್ಲಿ ಬೆಂದ ಹೆಣ್ಣು ಮಕ್ಕಳಿಬ್ಬರ ಕಥೆ ಹೇಳಿದ್ದೆ. ಈಗ ಮತ್ತೊಂದು ಕಥೆ ಹೇಳುತ್ತಿದ್ದೇನೆ. ಹೆಣ್ಣು ಮುಂದುವರಿದರೂ ಆಕೆಯ ಮೇಲಿನ ಅನ್ಯಾಯಗಳಿನ್ನೂ ಕೊನೆಯಾಗಲಿಲ್ಲ. ಈಕೆಯ ಹೆಸರು ಸುಲೇಖಾ ಮಹಿಪಾಲ್ . ಊರು ಡೆಹ್ರಾಡೂನ್. ಹುಟ್ಟಿದ್ದು ಜಾಡಮಾಲಿ ಕುಟುಂಬದಲ್ಲಿ. ಅಪ್ಪ ಅಮ್ಮನನ್ನು ವಿಷ ನೀಡಿ ಕೊಂದಾಗ ಸುಲೇಖಾಳಿಗೆ ಇನ್ನೂ ೧೩ ವರ್ಷ. ಅಪ್ಪನಿಂದ ದೂರಾದ ಸುಲೇಖಾಳ ಬದುಕು ಪ್ರತಿಕ್ಷಣವೂ ಶೋಷಣೆಗೊಳಗಾಯಿತು. ಭರವಸೆ ಕಳೆದುಕೊಂಡ ಅವಳ ಬದುಕಿನಲ್ಲಿ ಮತ್ತೆ ಭರವಸೆ ತುಂಬಿದ್ದು ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಮತ್ತು ತನ್ನ ಭಾ ಪತಿ. ಈಗ ಅನ್ಯಾಯದ ವಿರುದ್ಧ ಸುಲೇಖಾ ಹೋರಾಟಕ್ಕೆ ಭಾ ಪತಿಯೂ ಕೈ ಜೋಡಿಸಿದ್ದಾರೆ.
ಅಮ್ಮನನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಅಪ್ಪನ ರೌದ್ರವತಾರೆದುರು ಮಗಳು ಅಸಹಾಯಕಳಾಗಿ ಮೌನವಾಗಿದ್ದಳು. ಆಕೆಗಿನ್ನೂ ೧೩ ವರ್ಷ. ಆ ಪುಟ್ಟ ಹೆಣ್ಣು ಮಗಳ ಎದುರು ಅಮ್ಮ ಹತಳಾದಳು.
ಆ ದಿನ ಆತ ತನ್ನ ಪತ್ನಿಗೆ ವಿಷ ಕುಡಿಸಲು ಒಂದೇ ಸಮನೆ ಒತ್ತಾಯಿಸುತ್ತಿದ್ದ. ಆಕೆ ಒಪ್ಪಲಿಲ್ಲ. ಒಪ್ಪದಿದ್ದಾಗ ಬಾಸುಂಡೆಗಳು ಬರುವಂತೆ ಹೊಡೆದ. ಕೊನೆಗೆ ಕುಡಿದೇ ಬಿಟ್ಟಳು. ವಿಷ ಕುಡಿದ ಎರಡೇ ಗಂಟೆಗಳಲ್ಲಿ ಆ ತಾಯಿ ಅಸುನೀಗಿದಳು. ಆ ಮನುಷ್ಯ ಊರಲೆಲ್ಲಾ ತನ್ನ "ಪತ್ನಿ ಆತ್ಮಹತ್ಯೆ ಮಾಡಿಕೊಂಡಳೆಂದು'' ಡಂಗುರ ಸಾರಿದ. ಅಕ್ಕಪಕ್ಕದವರೆಲ್ಲಾ ಅಹುದಹುದೆಂದರು! ಅಪ್ಪನ ಕ್ರೌರ್ಯಕ್ಕೆ ಆ ಹೆಣ್ಣು ಮಗಳು ಮೂಕಸಾಕ್ಷಿಯಾಗಿದ್ದಳು.
ಆ ಹೆಣ್ಣು ಮಗುವೇ ಇಂದು ಡೆಹ್ರಾಡೂನ್‌ನ ಖಾಸಗಿ ಕಾಲೇಜೊಂದರಲ್ಲಿ ಕಾನೂನು ಪದವಿ ಓದುತ್ತಿರುವ ಮತ್ತು ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ನೂರಾರು ಹೆಣ್ಣುಮಗಳಿಗೆ ಆಸರೆಯಾಗುತ್ತಿರುವ ಸುಲೇಖಾ ಮಹಿಪಾಲ್.
ಸುಲೇಖಾ ಅವರದು ಜಾಡಮಾಲಿ ಕುಟುಂಬ. ಅಪ್ಪನಿಗೆ ಬೇರೊಬ್ಬಳೊಂದಿಗೆ ಜೊತೆ ಸಂಬಂಧವಿತ್ತು. ಅದೇ ಕಾರಣಕ್ಕಾಗಿ ಆತ ಸುಲೇಖಾಳ ಅಮ್ಮನನ್ನು ಕೊಂದ. ಅಲ್ಲಿಂದ ಸುಲೇಖಾ ಸಾಗಿದ್ದು ಹರಿಯಾಣದಲ್ಲಿರುವ ತನ್ನ ಅಜ್ಜನ ಮನೆಗೆ. ಅಂದರೆ, ಅವಳ ಅಮ್ಮನ ಅಪ್ಪನ ಮನೆಗೆ. ಅಜ್ಜನ ಮನೆಯಲ್ಲೇ ಪ್ರಾಥಮಿಕ ಶಿಕ್ಷಣವೂ ಆಯಿತು. ಆದರೆ, ಸುಲೇಖಾ ಬದುಕು ಅಲ್ಲಿ 'ಗುರಿ' ತಲುಪಲಿಲ್ಲ. ಮರಳಿ ಅಪ್ಪನ ಹುಡುಕಿ ಬಂದಳು. ಯಾರೂ ಇಲ್ಲದ ಬದುಕಿಗೆ ಮತ್ತೆ ಅಪ್ಪ ಬೇಕಾದ. ಮಲತಾಯಿ ಬೇಕಾದಳು. ತನ್ನ ಒಡಹುಟ್ಟಿದ ತಮ್ಮಂದಿರ ಬದುಕು ನೋಡಬೇಕಾಯಿತು. ಅಪ್ಪ ಬಹಳ ದಿನ ಆಸರೆಯಾಗಲಿಲ್ಲ. "ಬೆಳಕು ಹುಡುಕಿ ಬಂದ ದಾರಿಯಲ್ಲಿ ಬೆಳಕಿರಲಿಲ್ಲ''
ಅಂದು ಏಪ್ರಿಲ್ ೧೮, ೨೦೦೮.
ಯಾರದೋ ಮಾತು ಕೇಳಿ ಸರ್ಕಾರ ಸಂಸ್ಥೆಯೊಂದರಲ್ಲಿ ಕೆಲಸ ಹುಡುಕಿ ಹೊರಟಳು. ಆದರೆ, ಅಲ್ಲಿ ನಡೆದಿದ್ದು ಮಹಾ ದುರಂತ. ತಂದೆ ಇದ್ದೂ ಆಕೆಗಿಲ್ಲ, ತಾಯಿ ಅಪ್ಪನಾದವನ ಕ್ರೌರ್ಯಕ್ಕೆ ಬಲಿಯಾದಳು. ತಮ್ಮಂದಿರು ಅವರ ದಾರಿ ಹಿಡಿದಿದ್ದರು. ಸುಲೇಖಾ ಸುತ್ತ ಬದುಕಿನ ಸಂಬಂಧಗಳೇ ಇರಲಿಲ್ಲ. ಸರ್ಕಾರಿ ಕಚೇರಿಯೊಂದಕ್ಕೆ ಸಂದರ್ಶನಕ್ಕೆಂದು ಹೋದಾಗ ಅದೇ ಸ್ಥಳದಲ್ಲಿ ತನ್ನ ಕಸಿನ್ ಸೇರಿದಂತೆ ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾದಳು! ಅಷ್ಟಕ್ಕೇ ನಿಲ್ಲಲಿಲ್ಲ. ಆ ದೃಶ್ಯವನ್ನು ವಿಡಿಯೋ ಟೇಪ್ ಮಾಡಿದರು. ಆ ಶಾಕ್‌ನಿಂದ ಹೊರಬರಲು ಅವಳಿಗೆ ದಿನ ತಿಂಗಳುಗಳೇ ಬೇಕಾದವು.
ಅಪ್ಪನೇ ಮಗಳನ್ನು ಹೊರದೂಡಿದ!
ಆ ಕ್ಷಣ ಅವಳಿಗೆ ನೆನಪಾಗಿದ್ದು ಜನ್ಮ ಕೊಟ್ಟ ಅಪ್ಪ. ಬಿಕ್ಕುತ್ತಾ ತನ್ನ ಕಥೆಯನ್ನು ಅಪ್ಪನೆದುರು ಹೇಳಿದಳು. ಒಂದಷ್ಟು ಹೊತ್ತು ಅಲ್ಲಿ ನಿಲ್ಲಲು ಅವಳಿಗೆ ಅವಕಾಶವಿರಲಿಲ್ಲ. ಸತ್ಯಕ್ಕೆ, ನ್ಯಾಯಕ್ಕೆ ಬೆಲೆ ಇರಲಿಲ್ಲ. ಯಾರದ್ದೋ ತಪ್ಪು, ಅಪ್ಪನೆದುರು ಮಗಳು ಅಪರಾಧಿಯಾದಳು. ಆತನೂ ಪುರುಷನೇ! ಏಕ್ ದಂ ಮಗಳನ್ನು ಹೊರಗೆ ದೂಡಿದ.
ಮನೆ ತೊರೆದು ಹೊರಟ ಸುಲೇಖಾಗೆ ಕಣ್ಣಿಗೆ ಬಿದ್ದಿದ್ದು ಡೆಹ್ರಾಡೂನ್ ನಗರದಲ್ಲಿ ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಹಾಕಿದ್ದ ದೊಡ್ಡ ಬೋರ್ಡು. ಅಲ್ಲಿ ಸಹಾಯವಾಣಿ ನಂ ಬರೆಯಲಾಗಿತ್ತು. ಅದನ್ನೇ ಸುಲೇಖಾ ಹೇಳುವುದು ಹೀಗೆ: “ಅಪ್ಪ ಮನೆಯಿಂದ ಹೊರ ಹಾಕಿದ. ಭರವಸೆ ಹುಡುಕಿ ಅಜ್ಜನ ಮನೆಗೆ ಹೋದೆ. ಅಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ನಡೆದಾಡುವ ಸ್ಥಿತಿ ಇರಲಿಲ್ಲ. ಅಲ್ಲಿಂದ ತಮ್ಮಂದಿರಿಗಾಗಿ ಮತ್ತೆ ಅಪ್ಪನ ಮನೆಗೆ ಬಂದೆ. ಆಗ ಸಣ್ಣ ಭರವಸೆ ಇತ್ತು. ಆದರೆ, ನಂತರ ನಡೆದ ಘಟನೆಗಳಿಂದಾಗಿ ಒಂಚೂರು ಭರವಸೆಯೂ ನನ್ನಲ್ಲಿ ಉಳಿದಿಲ್ಲ. ಆದರೆ, ಆ ದೊಡ್ಡ ಬೋರ್ಡ್ ನೋಡಿ ಮತ್ತೆ ಬದುಕುವ ಆಸೆ ಹುಟ್ಟಿತು. ತಕ್ಷಣ ನಾನು ಆ ಸಂಸ್ಥೆಗೆ ಭೇಟಿ ನೀಡಿ ನನಗೆ ನೆರವಾಗಲು ಬೇಡಿಕೊಂಡೆ” ಅದರಂತೆ ಸಮಾಧಾನ ಸಂಸ್ಥೆ ಆಕೆಗೆ ನೆರವಾಯಿತು. ಈಗ ಆಕೆ ತನ್ನ ವಿರುದ್ಧ ನಡೆದ ಅನ್ಯಾಯಗಳ ವಿರುದ್ಧ ಕೋರ್ಟ್ ಹತ್ತಿದ್ದಾಳೆ.
ಆದರ್ಶ ಪತಿರಾಯ
ಇದಕ್ಕೆ ಅವಳಿಗೆ ನೆರವಾಗಿತ್ತು ಅವಳ ಭಾ ಪತಿ. ಅಚ್ಚರಿ ಎಂದರೆ, ಹೆಂಡತಿ ಬೇರೊಬ್ಬ ಗಂಡನೊಂದಿಗೆ ಮಾತನಾಡಿದರೆ ಅಥವಾ ತನ್ನ ಹೆಂಡತಿ ಪರ ಪುರುಷನಿಂದ ಅತ್ಯಾಚಾರಗೊಳಗಾದರೆ ಯಾವ ಗಂಡನೂ ಸಹಿಸುವುದು ಕಷ್ಟವೇ. ಇಂಥ ಪ್ರಕರಣಗಳಿಗಾಗಿ ವಿಚ್ಚೇದನ ನೀಡಿದ ಅದೆಷ್ಟೋ ಗಂಡಸರನ್ನು ನಾವು ನೋಡಿದ್ದೇವೆ. ಆದರೆ, ಈತ ಹಾಗೇ ಮಾಡಲಿಲ್ಲ. ಸುಲೇಖಾಳ ಬದುಕಿನ ಪ್ರತಿ ಹೋರಾಟಗಳಿಗೂ ಧೈರ್ಯ ತುಂಬುತ್ತಿದ್ದಾನೆ. ಆತನೂ ಎಂಬಿಎ ವಿದಾರ್ಥಿ. ಒಂದು ರೀತಿಯಲ್ಲಿ ಆದರ್ಶ ಪತಿ. ಸದ್ಯದಲ್ಲೇ ಸುಲೇಖಾ ಆತನ ಜೊತೆ ಸಪ್ತಪದಿ ತುಳಿಯಳಿದ್ದಾಳೆ.
ಮತ್ತೆ ಭರವಸೆ ಹುಟ್ಟಿದೆ
""ನನ್ನಂಥವರು ಈ ದೇಶದಲ್ಲಿ ಸಾಕಷ್ಟು ಹೆಣ್ಣು ಮಕ್ಕಳಿರಬಹುದು. ಇಂಥ ಅನುಭವಗಳು ನಮ್ಮ ದೇಶದಲ್ಲಿ ಸಾಮಾನ್ಯ. ಹಾಗಂತ ನನ್ನ ಸುತ್ತ ಇರುವ ಅಪ್ಪ, ತಮ್ಮ...ಮುಂತಾದ ಸಂಬಂಧಗಳಿಂದ ಕಳಚಿಕೊಂಡು ದೂರ ಇರಬೇಕು ಅಂತ ಅನಿಸುವುದೇ ಇಲ್ಲ. ಅವರಿಗೆ ನನ್ನ ಬಗ್ಗೆ ಏನೇ ಅಭಿಪ್ರಾಯಗಳಿರಬಹುದು. ಆದರೆ ಅವರು ನನ್ನ ಬದುಕಿನ ಭಾಗ'' ಎನ್ನುವ ಸುಲೇಖಾ, ತನ್ನ ಪತಿಯ ಕುರಿತು ಹೆಮ್ಮೆಯಿಂದ ನುಡಿಯುವುದು ಹೀಗೆ: “೧೩ ವರ್ಷದಿಂದ ಈವರೆಗೆ ನಾನು ಕಂಡಿದ್ದು ಬರೇ ನೋವುಗಳೇ. ಅದು ಬರೇ ಪುರುಷನಿಂದಲೇ ನನ್ನ ಬದುಕು ಅನ್ಯಾಯಗೊಳಗಾಗಿತ್ತು. ಪುರುಷರ ಕುರಿತೇ ನಂಬಿಕೆ ಕಳೆದುಕೊಂಡಿದ್ದೆ. ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೆ, ಯಾವಾಗ ನನ್ನನ್ನು ಮದುವೆಗೆ ಒಪ್ಪಿದ್ದಾರೋ ಅಂದಿನಿಂದ ನನ್ನಲ್ಲಿ ಭರವಸೆ ಹುಟ್ಟಿದೆ. ಸದ್ಯದಲ್ಲೇ ನಮ್ಮ ಮದುವೆ. ಆದರೆ, ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ” ಎನ್ನುವ ಗಟ್ಟಿಮಾತು.
ಇಂದು ಸಮಾಧಾನದಲ್ಲಿ ತನ್ನಂತೆ ನೊಂದ ನೂರಾರು ಹೆಣ್ಣು ಮಕ್ಕಳಿಗೆ ಸುಲೇಖಾ ಆಸರೆಯಾಗುತ್ತಿದ್ದಾಳೆ. ಬದುಕಿನಲ್ಲಿ ಕಂಡ ಕಷ್ಟಗಳು ಅವಳ ಬದುಕನ್ನು ರೂಪಿಸಿವೆ. ಅನ್ಯಾಯದ ಎದುರು ಬದುಕು ಬೆತ್ತಲಾದರೂ ಅವಳು ಧೃತಿಗೆಡಲಿಲ್ಲ. ಅವಳೆದುರು ಸಹಾಯ ಹಸ್ತ ಚಾಚಿ ಬಂದವರಿಗೆ ಅವಳು ಹೇಳೋದಷ್ಟೇ: ಗಂಡಸರ ಗರಡಿಯಲ್ಲಿ ‘ಕಳೆದು’ಹೋದರೂ, ಬದುಕಿನಲ್ಲಿ ಆಶಾವಾದಗಳಿರಲಿ”. ಸುಲೇಖಾ ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು!
ಪ್ರಕಟ: http://www.hosadigantha.in/epaper.php?date=12-30-2010&name=12-30-2010-7