Monday, January 3, 2011

ಈ ಶಾಲೆಗೆ ಬಂದ್ರೆ ..."೧೦ ರೂ, ಒಂದು ಟಾಯ್ಲೆಟ್ ಫ್ರೀ''!

ಆ ಹಳ್ಳಿಯ ಹೆಣ್ಣುಮಕ್ಕಳಿಗೆ ತೊಟ್ಟಿಲಲ್ಲೇ ಕಂಕಣಭಾಗ್ಯ. ಅಲ್ಲಿನ ಹೆಣ್ಣುಮಕ್ಕಳ್ಯಾರೂ ಓದು-ಬರಹದ ಕನಸು ಕಂಡವರಲ್ಲ. ಏನಿದ್ದರೂ ಗಂಡಸರು ದುಡಿದ ಚಿಕ್ಕಾಸಿಗೆ ಕೈಯೊಡ್ಡಿ ನಿಲ್ಲಬೇಕು. ಬದುಕಿನಲ್ಲಿ ಯಾವ  ಭರವಸೆಯನ್ನೂ ಕಟ್ಟಿಕೊಳ್ಳಲಾಗದ ಆ ಹೆಣ್ಣುಮಕ್ಕಳು ನಾಲ್ಕು ಗೋಡೆಗಳ ಮಧ್ಯೆಗಷ್ಟೇ ಸೀಮಿತವಾಗಿದ್ದರು.
ಇದು ಉತ್ತರ ಪ್ರದೇಶದ ಅನೂಪ್‌ಷಾರ‍್ಹ್ ಎಂಬ ಕುಗ್ರಾಮ.

ಉತ್ತರ ಪ್ರದೇಶದ ಒಟ್ಟು ಗ್ರಾಮೀಣ ಪ್ರದೇಶದ ಸಾಕ್ಷರತೆ ಪ್ರಮಾಣ ಶೇ. ೪೩ ಇದ್ದರೂ, ಈ ಹಳ್ಳಿಯ ಪಾಲು ಈ ಅಂಕಿ-ಅಂಶದಲ್ಲಿ  ಸ್ಥಾನ ಪಡೆದಿಲ್ಲ. ಅಂಥ ಕುಗ್ರಾಮದಲ್ಲಿ  ಕಳೆದ ಹತ್ತು ವರ್ಷಗಳಲ್ಲಿ  'ಶಿಕ್ಷಣ ಕ್ರಾಂತಿ'ಯೇ ಆಗಿಬಿಟ್ಟಿದೆ. ಆ ಹಳ್ಳಿಯಲ್ಲಿದ್ದ ಸರ್ಕಾರಿ ಶಾಲೆ ಒಂದಿಬ್ಬರು ವಿದ್ಯಾರ್ಥಿನಿಯರನ್ನು ಪಡೆಯಲು ಪರದಾಡುತ್ತಿದ್ದರೆ, Pardada Pardadi ಎಂಬ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಮೀರಿದೆ. ವರ್ಷಂಪ್ರತಿ ಅಪ್ಲಿಕೇಶನ್ ಹಿಡಿದು ಬರುವವರ ಸಂಖ್ಯೆ ಹೆಚ್ಚಿಬಿಟ್ಟಿದೆ. ಇಂಥ ಕ್ರಾಂತಿಗೆ ಕಾರಣವಾಗಿದ್ದು  ನಿವೃತ್ತ ಕಾರ್ಪೋರೇಟ್ ಅಧಿಕಾರಿಯೊಬ್ಬರು.

ಅವರ ಹೆಸರು ವಿರೇಂದ್ರ ಸಿಂಗ್.
ವಿರೇಂದ್ರ ಸಿಂಗ್ ಅವರು ಅಮೆರಿಕದ ಡೂಪಾಂಟ್ ಎನ್ನುವ ಪ್ರತಿಷ್ಠಿತ ಕೆಮಿಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕೈ ತುಂಬಾ ಸಂಬಳ. ಮನೆಯಲ್ಲಿಯೂ ಬಡತನದ ಗಂಧಗಾಳಿ ಇಲ್ಲ. ದುಡ್ಡಿನಾಸಿಗೆಯಲ್ಲೇ ಬೆಳೆದ ಆ ಫ್ಯಾಮಿಲಿಗೆ ಸಿಂಗ್ ಅವರೇನೂ ಆಧಾರವಾಗಿರಲಿಲ್ಲ. ಸಮಾಜ ಸೇವೆ ಅಂದ್ರೆ ಆ ಮನುಷ್ಯನಿಗೆ ಅದೇನಂತಾನೇ ಗೊತ್ತಿರಲಿಲ್ಲ. ಆದರೂ, ಸ್ವತಃ ಕೆಮಿಕಲ್ ಕಂಪನಿಯ ಮುಖ್ಯಸ್ಥನ ಹುದ್ದೆಯಲ್ಲಿದ್ದ ಸಿಂಗ್ ಅವರಿಗೆ ೧೯೮೪ರಲ್ಲಿ ನಡೆದ ಭೋಪಾಲ್ ಅನಿಲ ದುರಂತ ಮನ ಕೆಡಿಸಿತು. ಅಲ್ಲಿ ಉಂಟಾದ ಸಾವು-ನೋವುಗಳಿಗೆ ಅರಿವಿಲ್ಲದೆಯೇ ಕಂಬನಿ ಮಿಡಿದರು. ದುರಂತದಿಂದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಇಂದಿಗೂ ದುರಂತ ನಡೆದ ಸುತ್ತಮುತ್ತಲಿನ ಜನ ಆ ದುರಂತದ ಪಾಪದಿಂದ ಮುಕ್ತರಾಗಿಲ್ಲ. ಇವರೆಲ್ಲ  ನಾನು ಹುಟ್ಟಿದ ನೆಲ ಭಾರತದವರು, ನಾನೂ ಅದೇ ಪುಣ್ಯಭೂಮಿಯಲ್ಲಿ  ಜನಿಸಿದ್ದು ...ಎಂದು ತಮ್ಮೊಳಗೆ ಮರುಗಿದರು. ಆವಾಗಲೇ ಅವರಿಗೆ ಅನಿಸಿದ್ದು; ನನ್ನ ದೇಶಕ್ಕಾಗಿ ನಾನೇನಾದರೂ ಮಾಡಲೇಬೇಕು ಎಂದು!


ಆಗ ಹೊಳೆದಿದ್ದೇ ಅನೂಪ್‌ಷಾರ್ಹ್ ಎಂಬ ಗ್ರಾಮ. ಓದಿನ ಬೆಳಕಿನ್ನೂ ಹಚ್ಚದ ಅಲ್ಲಿಯ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರೆ ನೂರಾರು ಹೆಣ್ಣುಮಕ್ಕಳು ಓದಿ ವಿದ್ಯಾವಂತರಾಗಬಹುದು. ಆಗ ನನಗೆ ಜನ್ಮನೀಡಿದ ಭಾರತ ನೆಲಕ್ಕೆ ನಾನೇನಾದರೂ ನೀಡಿದಾಗೆ ಆಗುತ್ತೆ ಎಂಬ ದೃಢ ನಿರ್ಧಾರಕ್ಕೆ ಬಂದರು. ಅದು ನಿವೃತ್ತಿಯ ವಯಸ್ಸುನೂ ಹೌದು. ೩೫ ವರ್ಷ ಕೈತುಂಬಾ ದುಡ್ಡು ನೀಡಿದ ಡೂ ಪಾಂಟ್ ಸಂಸ್ಥೆಗೆ ಗುಡ್ ಬೈ ಹೇಳಿದರು. ೨೦೦೦ರಲ್ಲಿ  ಆ ಹಳ್ಳಿಯಲ್ಲಿ ಶಾಲೆಯೊಂದನ್ನು ಆರಂಭಿಸಿಯೇ ಬಿಟ್ಟರು. ಆಗ  ಆ ಶಾಲೆಗೆ ಸೇರಿದ ಹೆಣ್ಣು ಮಕ್ಕಳ ಸಂಖ್ಯೆ ಕೇವಲ ೩೫. ಆದರೆ, ಅಲ್ಲಿನ ಶಾಲೆಗಳಲ್ಲಿ  ವಿದ್ಯಾರ್ಥಿಗಳನ್ನು ಹೊಂದಿಸುವುದೇ ಹರಸಾಹಸದ ಕೆಲಸವಾಗಿತ್ತು. ಅದಕ್ಕೆ ಅವರು ಕಂಡುಕೊಂಡ ಉಪಾಯ ಇನ್ನೂ ವಿಭಿನ್ನ.

ಕ್ಲಿಕ್ ಆಯಿತು ಐಡಿಯಾ....
""ನನ್ನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರತಿ ದಿನ ೧೦ ರೂ. ಮತ್ತು ಮೂರು ಹೊತ್ತಿನ ಊಟ ನೀಡುತ್ತೇನೆ. ಹಾಗೆಯೇ ಎರಡು ವರ್ಷದ ತಪ್ಪದೆ ಶಾಲೆಗೆ ಹಾಜರಾದ್ರೆ ಒಂದು ಸೈಕಲ್ ಮತ್ತು ಮೂರು ವರ್ಷ  ತಪ್ಪದೆ ಹಾಜರಾದರೆ ನಿಮ್ಮ ಮನೆಗೆ ಒಂದು ಶೌಚಾಲಯ ನೀಡುತ್ತೇನೆ'' ಎಂದು ಘೋಷಿಸಿಯೇ ಬಿಟ್ಟರು ಸಿಂಗ್!  ವಿರೇಂದ್ರ ಸಿಂಗ್ ಅವರ ಘೋಷಣೆಗಳು ಅಲ್ಲಿನ  ಹೆತ್ತವರ ಕಿವಿಗೆ ಬಿದ್ದಿದ್ದೇ ತಡ, ತಿಪ್ಪರಲಾಗ ಹಾಕಿಯಾದ್ರೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಹಠಕ್ಕೆ ಬಿದ್ದರು. ತಮ್ಮ ಮಕ್ಕಳಿಗೆ ಮೂರು ಹೊತ್ತಿನ ಊಟ,ಹತ್ತು ರೂ, ಸೈಕಲ್, ಶೌಚಾಲಯ ಹೊಟ್ಟೆಗೆ ಹಿಟ್ಟಿಲ್ಲದವರ ಬದುಕಿಗೇ
ಆಧಾರವಾಯಿತು. . ಇಂಥದ್ದೂ  ಪ್ಲಾನ್ ಮಾಡುತ್ತಾರೋ? ಎಂದು ರೇಂದ್ರ ಸಿಂಗ್  ಅವರ ಈ ಘೋಷಣೆಯನ್ನು ಕೇಳಿದಾಗ ಆಡಿಕೊಂಡವರೆಷ್ಟೋ. ಆದರೆ, ರೇಂದ್ರ ಅವರ ಬಂಪರ್ ಐಡಿಯಾ ಕ್ಲಿಕ್ ಕೂಡ ಆಯಿತು. ವಾರದ ಎಲ್ಲಾ ದಿನಗಳಲ್ಲೂ  ಎಲ್ಲಾ ಮಕ್ಕಳೂ ಹಾಜರಾಗುತ್ತಿದ್ದರು. ಅಲ್ಲಿಯವರೆಗೆ ಶಾಲೆಗೆ ಕಳುಹಿಸುವುದೆಂದರೆ ಹಿಂದೆ-ಮುಂದೆ ನೋಡುತ್ತಿದ್ದ ಹೆತ್ತವರೂ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೇ ಕರೆತಂದು ಬಿಟ್ಟುಹೋಗುತ್ತಿದ್ದರು. ಇಂದು ಈ ಶಾಲೆಯ ವಿದ್ಯಾರ್ಥಿನಿಯರ ಸಂಖ್ಯೆ  ಎಷ್ಟು ಗೊತ್ತಾ? ಒಂದು ಸಾವಿರ ಮೀರಿದೆ!!

ಪುಸ್ತಕದ ಬದನೆಕಾಯಿಗಳಲ್ಲ...
ಕಳೆದ ೧೦ ವರ್ಷಗಳಲ್ಲಿ ಈ ಶಾಲೆಯಲ್ಲಿ ಓದಿ ಪದವಿ ಪಡೆದು ಭವಿಷ್ಯ ಕಟ್ಟಿಕೊಂಡವರ ಸಂಖ್ಯೆ ಅರ್ಧಶತಕ ದಾಟಿದೆ. ಪ್ರತಿ ವರ್ಷ ಶಾಲೆಗೆ ಬರುವವರ ಸಂಖ್ಯೆ, ಶಾಲಾ ವತಿಯಿಂದ ಶೌಚಾಲಯ, ಸೈಕಲ್ಲು
ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ ಯಾವ ಸರ್ಕಾರಿ ಶಾಲೆಗಳು ಕಾಣದ ಬೃಹತ್ ಪ್ರಗತಿಯತ್ತ ಈ ಶಾಲೆ ಮುಂದಡಿಯಿಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ  ಈ ಶಾಲೆ ಹತ್ತು ಗ್ರಾಮಗಳನ್ನು ಕವರ್ ಮಾಡಿದೆ. ಹಾಗಂತ ಇಲ್ಲಿಯ ವಿದ್ಯಾರ್ಥಿನಿಯರು ಬರೇ ಪುಸ್ತಕದ ಬದನೆಕಾಯಿಗಳಲ್ಲ. ಇಲ್ಲಿ  ಬೆಳಿಗ್ಗೆ  ತರಗತಿಗಳಿಗೆ  ಹಾಜರಾದರೆ, ಸಂಜೆಯ ಹೊತ್ತು ಪಠ್ಯೇತರ ಚಟುವಟಿಕೆಗಳಿಗೆ ಮೀಸಲು. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಯಾರ ಮೇಲೂ ಅವಲಂಬಿಸಬಾರದು. ತಮ್ಮ ಬದುಕನ್ನು ತಾವೇ ಕಟ್ಟಿಕೋಬೇಕು ಅನ್ನೋ ಉದ್ದೇಶದಿಂದ ಅವರಿಗೆ ನಿತ್ಯ ಸಂಜೆ ವೇಳೆಗೆ ಟೈಲರಿಂಗ್, ಎಂಬ್ರಾಯಿಡರಿ ಮುಂತಾದವುಗಳನ್ನು ಕಲಿಸಿಕೊಡಲಾಗುತ್ತದೆ. ಇವರೇ ತಯಾರಿಸಿದ ಎಂಬ್ರಾಯಿಡರಿ ಉತ್ಪನ್ನಗಳು ದೆಹಲಿಯ ಮುಖ್ಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತವೆ. ಆ ಸಂಪಾದನೆ ಅವರಿಗೇ. 

"
"No social progress can happen without educating women'' ಅಂತಾರೆ. ವಿರೇಂದ್ರ ಸಿಂಗ್ ಅವರು ಈ ಮಾತನ್ನು ನಿಜವಾಗಿಸ ಹೊರಟಿದ್ದಾರೆ. ಶಿಕ್ಷಣದ ಅಭಿವೃದ್ಧಿಗಾಗಿ ಸರ್ಕಾರಗಳು ಮಧ್ಯಾಹ್ನದ ಊಟ ನೀಡುತ್ತಾರೆ, ಸೈಕಲ್ ನೀಡುತ್ತಾರೆ. ಆದರೆ, ನಮ್ಮಲ್ಲಿ ಮಧ್ಯಾಹ್ನದ ಊಟವನ್ನೂ, ಸರ್ಕಾರಗಳು ನೀಡುವ ಸೈಕಲ್ಲನ್ನೂ ಕದಿಯುವ ಖದೀಮರಿದ್ದಾರೆ. ಆದರೆ, ರೇಂದ್ರ ಸಿಂಗ್  ಅವರಂಥವರ ಕನಸುಗಳನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ!!



ಪ್ರಕಟ: http://www.hosadigantha.in/epaper.php?date=11-04-2010&name=11-04-2010-7

No comments:

Post a Comment