Monday, January 3, 2011

ಕಣ್ಣೀರ ಭಾಷೆ ಅರ್ಥವಾಗದವರಿಗೆ...


"ಒಬ್ಬ ವ್ಯಕ್ತಿಯ ಕಣ್ಣೀರು, ದುಃಖ, ವಿಷಾದಗಳು ಅರ್ಥವಾಗದವನಿಗೆ ಅಧಿಕಾರವೂ ಅರ್ಥವಾಗಲು ಸಾಧ್ಯವಿಲ್ಲ. ಈ ಮೂರು ಅರ್ಥವಾಗದವನು ಅಧಿಕಾರ ಎಂದರೆ ಮೋಜು ಎಂದು ಅರ್ಥಮಾಡಿಕೊಳ್ಳುವ ಅಪಾಯವಿದೆ'' ಬ್ರಿಟನ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ತನ್ನ ಆತ್ಮಕಥೆಯಲ್ಲಿ ಹೇಳಿದ್ದು ಹೀಗೆ. ಜನರ ಕಣ್ಣೀರು, ಕಣ್ಣೀರ ಭಾಷೆ ಅರ್ಥವಾದವನಿಗೆ ಮಾತ್ರ ಅಧಿಕಾರ ಎಂದರೆ ಏನೂಂತ ಅರ್ಥವಾಗಬಹುದು ಎನ್ನುವುದು ಚರ್ಚಿಲ್ ಮಾತು.

    ಹೌದು, ನನಗೂ ನೆನಪಾಯಿತು. ನಮ್ಮಲ್ಲೂ ಜನಪ್ರಿಯ ರಾಜಕಾರಣಿಗಳಿದ್ದಾರೆ.  ಜನರ ಕಣ್ಣೀರ ಜೊತೆ ತಾವೂ ಕಣ್ಣೀರಧಾರೆಯಾಗುವ ಜನಪ್ರತಿನಿಧಿಗಳಿದ್ದಾರೆ. ಕೆಲತಿಂಗಳ ಹಿಂದೆ ರಾಜ್ಯದಲ್ಲಿ ನೆರೆ ಬಂದಾಗ, ಜನರು ಕಷ್ಟಗಳನ್ನು ತೋಡಿಕೊಂಡು ಅತ್ತಾಗ ತಾವೂ ಅತ್ತು ನೀರಾದವರು ಇದ್ದಾರೆ!  ಗೋಲಿಬಾರ್‌ನಲ್ಲಿ ರೈತ ಗುಂಡೇಟಿಗೆ ಬಲಿಯಾದಾಗ ರೈತನ ಶವದೆದುರು ಗಳಗಳನೆ ಅತ್ತು ಮಾಧ್ಯಮದಲ್ಲಿ ದೊಡ್ಡ ಫೋಟೋವಾಗಿ ರಾರಾಜಿಸಿದ ರಾಜಕಾರಣಿಗಳಿಗೇನು ನಮ್ಮಲ್ಲಿ ಬರಗಾಲವಿಲ್ಲ.

    ಆದರೆ, ಚರ್ಚಿಲ್ ಹೇಳಿರುವ ಮಾತಿಗೂ, ನಮ್ಮ ರಾಜಕಾರಣಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.  ಎರಡನೇ ಮಹಾಯುದ್ಧದ ಸಮಯದಲ್ಲಿ ಚರ್ಚಿಲ್ ಮ್ಯಾಂಜೆಸ್ಟರ್‌ಗೆ ಹೋಗಿದ್ರಂತೆ. ಅಲ್ಲಿ ಚರ್ಚಿಲ್ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ವೇದಿಕೆ ಭರ್ಜರಿಯಾಗೇ ಸಿದ್ಧವಾಗಿತ್ತು. ಅವರು ವೇದಿಕೆ ಹತ್ತಬೇಕಾದ್ರೆ ಐವರು ಮಹಿಳೆಯರು ಬಂದು ಚರ್ಚಿಲ್ ಎದುರು ಜೋರಾಗಿ ಅಳತೊಡಿದ್ದರಂತೆ. ಅವರೆಲ್ಲರೂ ಯುದ್ಧದಲ್ಲಿ ಮಡಿದ ಯೋಧರ ಅಮ್ಮಂದಿರು. ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಅದುಮಿಡಲಾಗದೆ ಅವರು ರೋದಿಸಿದಾಗ, ಅವರನ್ನು ತಬ್ಬಿಕೊಂಡು ಚರ್ಚಿಲ್ ಕೂಡ ಎಳೆಮಗುವಿನಂತೆ ಅತ್ತರಂತೆ. ಕಣ್ಣೀರ ಕಡಲಾದ ಚರ್ಚಿಲ್ ಏನೂ ಮಾತನಾಡದೆ ಅಲ್ಲಿಂದ ಹೊರಟುಬಿಟ್ಟಿದ್ದರು. ಆದರೆ, ಹಾಗೇ ಹೊರಡಲಿಲ್ಲ. ಮರುದಿನ ಮತ್ತೆ ಬಂದು ಆ ತಾಯಂದಿರನ್ನು ಸಮಾಧಾನಿಸಿದ್ದರಂತೆ. ಯುದ್ಧ, ಸಾವು, ನೋವುಗಳ ಕುರಿತು ವಿವರಿಸಿದ್ದರಂತೆ. ಒಬ್ಬ ಜನಪ್ರತಿನಿಧಿ ಏನು ಮಾಡಬಹುದು ಅದೆಲ್ಲವನ್ನೂ ಮಾಡಿದರು. ಆ ಅಮ್ಮಂದಿರ ಮುಖದಲ್ಲಿ ಧೈರ್ಯದ ಕಳೆ ಮೂಡಿತ್ತು. ಹಾಗೇ ಹೊರಟಾಗ, ‘ಮುಂದಿನ ಜನ್ಮವಿದ್ದರೆ, ನಾನು ಐದು ಅವತಾರ ತಾಳಿ ನಿಮ್ಮ ಹೊಟ್ಟೆಯಲ್ಲಿ ಮರುಹುಟ್ಟು ಪಡೆಯುತ್ತೇನೆ ಎಂದಿದ್ದರಂತೆ!
ಅಬ್ಬಾ! ಹೃದಯದ ಮಾತು.
ಬಹುಶಃ ಇಂಥ ಹೃದಯವಂತ ಮಾತ್ರ ಜನರನ್ನು ಗೆಲ್ಲಬಲ್ಲ.

    ನಮ್ಮಲ್ಲಿ ರಾಜಕಾರಣಿಗಳು ಹೋದಲೆಲ್ಲಾ ಜನ ಅವರನ್ನು ಸುತ್ತುವರಿಯುತ್ತಾರೆ. ಕಷ್ಟಗಳನ್ನು ತೋಡಿಕೊಳ್ಳಲು ಹವಣಿಸುತ್ತಿರುತ್ತಾರೆ. ಆದರೆ,  ರಾಜಕಾರಣಿಗಳ ಭದ್ರತೆಗಾಗಿ ನೇಮಿಸುವ ಪೊಲೀಸರು ಜನರನ್ನು ಅವರ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಕೆಲ ರಾಜಕಾರಣಿಗಳು ಜನರು ಅಳುವಾಗ ಅತ್ತೇಬಿಡ್ತಾರೆ, ಮರುದಿನ ಅತ್ತ ಫೋಟೋ ಬಂದಿಲ್ಲವಾದರೆ ಅವರ ಪಿ.ಎ. ಫೋನ್ ಮಾಡಿ, ''ಸಚಿವ ಸಾಹೇಬ್ರ ಫೋಟೋನೇ ಬಂದಿಲ್ಲ ಪತ್ರಿಕೇಲಿ...''ಅಂತ ವರದಿ ಒಪ್ಪಿಸುತ್ತಾನೆ.
    ಚರ್ಚಿಲ್ ಜೊತೆ ನೆನಪಾಗುವವರು ಫ್ರಾನ್ಸ್ ದೇಶದ ಮಾಜಿ ಅಧ್ಯಕ್ಷ ಮಿತ್ತೆರಾಂದ್, "ನಾನು ಮೂಲಭೂತವಾಗಿ ರಾಜಕಾರಣಿಯಲ್ಲ. ರಾಜಕಾರಣ ಮತ್ತು ತತ್ವಶಾಸ್ತ್ರವನ್ನು ತಿಳಿಯಲೆತ್ನಿಸುವ  ನಮ್ರ ವಿದ್ಯಾರ್ಥಿ. ನಿಸರ್ಗದ ತಿಳುವಳಿಕೆ ಇಲ್ಲದೆ ಜನಸಾಮಾನ್ಯನ ನಿತ್ಯ ಬದುಕನ್ನು ಅರಿಯಲಾಗದೆ ಈ ರಾಜಕೀಯ ಕೃತಕ ಹೂವಿನಂತಿದೆ'' ಎಂದವರು ಮಿತ್ತೆರಾಂದ್.
    ಪ್ರಕೃತಿ ಪ್ರಿಯರಾದ ಮಿತ್ತೆರಾದ್, ''ಸಂಜೆಯ ಕಾಂತಿ ಗೊತ್ತೆ? ಗಗನಚುಂಬಿಸುವ ಓಕ್ ಮರಗಳ ನಡುವೆ ತೂರಿಬರುವ ಕಿರಣಗಳು ಎಷ್ಟು ಚೆಂದ, ಆಕಾಶದ ಅಸಂಖ್ಯ ಬಣ್ಣಗಳು ಎಷ್ಟು ಚಂದ?''  ಎಂದು ವರ್ಣಿಸುತ್ತಿದ್ದರು. ಒಂದು ಬಾರಿ ಇಸ್ರೇಲಿಗೆ ಭೇಟಿ ನೀಡಿದ ಮಿತ್ತೆರಾಂದ್, ''ಬದುಕುವ ಹಕ್ಕು ನಿಮಗಿರುವಂತೆ ಎಲ್ಲಾ ದೇಶಗಳ ಜನತೆಗೂ ಇದೆ. ಆದ್ದರಿಂದ  ನಾನು ನಿಮಗೆ ಸುಳ್ಳು ಹೇಳಿ ಹುರಿದುಂಬಿಸದೆ ಸ್ನೇಹಿತನಾಗಿ ಹೇಳುತ್ತಿದ್ದೇನೆ ಕೇಳಿ. ಪ್ಯಾಲೇಸ್ತೀನಿನ ಜನರಿಗೆ ಅವರ ದೇಶ ಸ್ವಾತಂತ್ರ್ಯವನ್ನು ನೀವು ಕೊಡಬೇಕು. ನಿಮ್ಮಷ್ಟೇ ನಿಮ್ಮ ನೆರೆಹೊರೆಯವರಿಗೂ ಬದುಕುವ ಹಕ್ಕಿದೆ'' ಎಂದಿದರೆಂತೆ!

    ಅಷ್ಟೇ ಅಲ್ಲ, ಇಸ್ರೇಲಿನಲ್ಲಿ ಭಾಷಣ ಮಾಡಿದ ''ನಾವೀಗ ಸೋಲಿಸಬೇಕಾಗಿರುವುದು ಬಂಡವಾಳ ಶಾಹಿಗಳ ಶಕ್ತಿಯನ್ನು . ಅಂದರೆ ಅದರರ್ಥ ಜನರನ್ನು ಭ್ರಷ್ಟಗೊಳಿಸುವ, ಜನರನ್ನು ಮಾರಾಟದ ವಸ್ತುಗಳನ್ನಾಗಿ ಮಾಡುವ, ಜನರನ್ನು ಕೊಲ್ಲುವ, ಹಿಂಸಿಸುವ ನಾಶಗೊಳಿಸುವ ಬಂಡವಾಳವನ್ನು , ಜನರ ಸೂಕ್ಷ್ಮಜ್ಞತೆಯನ್ನು ಕೊಂದು ಪಶುಪತಿಗಳಾಗಿಸುವ ಏಕ ಸ್ವಾಮ್ಯವನ್ನು'' ಎಂದಿದ್ದರು. ಅವರ ಮಾತಿನಿಂದಲೇ ಮಿತ್ತೆರಾಂದ್ ವ್ಯಕ್ತಿತ್ವ ತಿಳಿಯಬಹುದು.

    ಯಾವುದೇ ರಾಜಕಾರಣಿಗೆ ಇಂಥ ಸೂಕ್ಷ್ಮ ಸಂವೇದನೆಯೊಂದಿದ್ದರೆ ಮಾತ್ರ ಅವನು ಜನರನ್ನು ಅರ್ಥಮಾಡಿಕೊಳ್ಳ ಮತ್ತು ಜನರ ಕಣ್ಣೀರ ಭಾಷೆಯನ್ನೂ, ಅಧಿಕಾರವನ್ನೂ ಅರ್ಥಮಾಡಿಕೊಳ್ಳಬಲ್ಲ. ಆದರೆ, ಇಂಥ ಸಂವೇದನೆ ಯಾರಲ್ಲಿದೆ ಎಂದು ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗುವುದು ಮಾತ್ರ ಕಷ್ಟವೇ. ಇತ್ತೀಚೆಗೆ ಪಿ. ಲಂಕೇಶ್  ಅವರ ಟೀಕೆ-ಟಿಪ್ಪಣಿ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು ಮಿತ್ತೆರಾಂದ್ ಕುರಿತು, 'ಫ್ರಾನ್ಸ್‌ನ ನಳನಳಿಸುವ ಗುಲಾಬಿ' ಎಂದು ಬರೆದಿದ್ದರು. ಮನದಾಳದಲ್ಲಿ ಚರ್ಚಿಲ್, ಮಿತ್ತೆರಾಂದ್ ಮತ್ತು ನಮ್ಮ ಈಗಿನ 'ಮುಖವಾಡ' ಧರಿಸಿದ ಅದೆಷ್ಟೋ ರಾಜಕಾರಣಿಗಳ ಮುಖ ಸರಿದುಹೋಯಿತು.

No comments:

Post a Comment