Monday, January 3, 2011

ಅವಳೊಂದಿಗೆ ಭಾಷೆಯೂ ಮಣ್ಣಾಯಿತು


ಕಾಡುಹಂದಿ ಬೇಟೆ ಅಂದ್ರೆ ಅವಳಿಗಿಷ್ಟ. ದಟ್ಟಾರಣ್ಯದಲ್ಲಿ ಹೆಜ್ಜೆಗೊಂದು ಸಿಗುತ್ತಿದ್ದ ಆಮೆಗಳನ್ನೂ ಅವಳು ಬಿಟ್ಟವಳಲ್ಲ. ತಾನು ಹೋದಲೆಲ್ಲಾ ಬಿಲ್ಲು ಬಾಣಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಆ ಹೆಣ್ಣುಮಗಳು ತನ್ನ ಜೀವನಶಾಲೆಯನ್ನು ತಾನೇ ನಿರ್ಮಿಸಿಕೊಂಡವಳು. ಅವಳು ಹುಟ್ಟಿದ್ದು ಉತ್ತರ ಅಂಡಮಾನ್‌ನ ದಟ್ಟ ಕಾನನದಲ್ಲಿ. ೮೫ ವರ್ಷಗಳ ಹಿಂದೆ ಅವಳು ಹುಟ್ಟಿದಾಗ ಅವಳ ಜೊತೆ ಒಡನಾಡುವ ಸಂಗತಿಗಳಿದ್ದರು. ಸಮಾಜದ ಮುಖ್ಯವಾಹಿನಿ ಅಂದ್ರೆ ಅವಳಿಗೇನೂ ಗೊತ್ತಿಲ್ಲ. ವಿದ್ಯೆಯೆಂಬುವುದರ ನಂಟು ಆ ಕಾಡಿಗಿಲ್ಲ. ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವಿದ್ದಾಗ ಅಂಡಮಾನನ್ನು ‘ಶಿಕ್ಷಾರ್ಹ ತಾಣ’ವೆಂದು ಪರಿಗಣಿಸಿ, ಸ್ವಾತಂತ್ರಕ್ಕಾಗಿ ಹೋರಾಡಿದ ಅದೆಷ್ಟೋ ಭಾರತೀಯರನ್ನು ಅಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದಾಳೆ. ತನ್ನ ಪರಿವಾರದವರು ಕಳ್ಳಭಟ್ಟಿ ಕುಡಿದು ಎಂಜಾಯ್ ಮಾಡುತ್ತಿದ್ದಾಗ ತಾನೂ ಅವರೊಂದಿಗೆ ಸಂಭ್ರಮಿಸಿದ್ದಾಳೆ. ೨೦೦೪ರಲ್ಲಿ ಅಂಡಮಾನ್ ಪ್ರದೇಶಕ್ಕೆ ಭೀಕರ ಸುನಾಮಿ ಕಾಲಿಟ್ಟಾಗ ೩೫೧೩ ಮಂದಿ ಸಾವನ್ನಪ್ಪಿದ್ದರೂ, ಈಕೆ ಮಾತ್ರ ಬದುಕುಳಿದಿದ್ದಳು. ಇದು ಅವಳ ಅದೃಷ್ಟವೋ ಏನೋ?

ಅಂಥ ಉತ್ಸಾಹದ ಬದುಕು ಕಂಡ ಆ ಕಾಡಿನ ಮಹಿಳೆಯ ಹೆಸರು ಬೋ ಎಸ್‌ಆರ್...
ಅದೇನು ವಿಶೇಷ ಅಂತೀರಾ? ಇತ್ತೀಚೆಗಷ್ಟೇ ಬೋ ಎಸ್‌ಆರ್ ನಿಧನವಾಗಿದ್ದಾಳೆ. ಇದು ಇವಳ ಸಾವು ಮಾತ್ರವಲ್ಲ, ದೇಶದ ಪುರಾತನ ಭಾಷೆಯ ಸಾವು, ಸಾಂಸ್ಕೃತಿಕ ಪರಂಪರೆಯ ಸಾವು ಕೂಡಾ ಹೌದು.
ಬೋ ಎಂದರೆ....
ಬೋ ಎಂಬುವುದು ವಿಶಿಷ್ಟವಾದ ಬುಡಕಟ್ಟು ಭಾಷೆ. ಈ ಭಾಷೆಯ ತವರು ಆಫ್ರಿಕಾ. ೭೦,೦೦೦ ವರ್ಷಗಳ ಹಿಂದೆಯೇ ಬೋ ಎನ್ನುವ ಬುಡಕಟ್ಟು ಜನಾಂಗ ಆಗ್ನೇಯ ಏಷ್ಯಾ ಭಾಗಕ್ಕೆ ವಲಸೆ ಬಂದಿದ್ದರು. ಅಂತೆಯೇ ಅಂಡಮಾನಿನಲ್ಲೂ ಬೋ ಜನಾಂಗ ಅಸ್ತಿತ್ವ ಕಂಡುಕೊಂಡಿತ್ತು. ೧೮೫೮ರಲ್ಲಿ ಅಂಡಮಾನಿನಲ್ಲಿ ಬೋ ಜನಾಂಗಕ್ಕೆ ಸೇರಿದ ಸುಮಾರು ೫ ಸಾವಿರ ಜನರಿದ್ದರು. ಕ್ರಮೇಣ ಅಲ್ಲಿ ಬ್ರಿಟೀಷರು ತಮ್ಮ ಅಧಿಪತ್ಯ ಸ್ಥಾಪಿಸಿದಾಗ ಅಮಾಯಕ ಬೋ ಜನಾಂಗ ಬ್ರಿಟೀಷರ ದಬ್ಬಾಳಿಕೆಗೆ ಬಲಿಯಾದರು. ಸಮಾಜದ ಮುಖ್ಯವಾಹಿನಿಯ ಕುರಿತು ಒಂದಿಷ್ಟೂ ತಿಳಿವಿರದ ಬೋ ಜನರಿಗೆ ರೋಗಗಳು ಬಂದರೂ ಅದಕ್ಕೂ ಸಾವೇ ಪರಿಹಾರ. ಬ್ರಿಟೀಷರ ದಬ್ಬಾಳಿಕೆ ಮತ್ತು ಹೇಳಿಕೇಳದೆ ಬರುವ ಹಲವಾರು ಸಾಂಕ್ರಾಮಿಕ ರೋಗಗಳ ಪರಿಣಾಮ ಬೋ ಜನಾಂಗ ವಿನಾಶದ ಹಾದಿ ಹಿಡಿಯಿತು.
ಕಳೆದ ನಲವತ್ತು ವರ್ಷದಿಂದ ಬೋ ಎಸ್‌ಆರ್ ಅವಳದು ಏಕಾಂಗಿ ಬದುಕು. ಅವಳಿಗೆ ಬರುವುದು ಅದೊಂದೇ ಭಾಷೆ ಬೋ. ಹಾಗಾಗಿ ಸುತ್ತಮುತ್ತಲಿನ ಯಾರ ಜೊತೆಯೂ ಸಂವಹನ ಸಾಧ್ಯವಿರಲಿಲ್ಲ. ೧೯೭೦ರಲ್ಲಿ ಭಾರತ ಸರ್ಕಾರ ಅಂಡಮಾನಿನಲ್ಲಿದ್ದ ಬೋ ಎಸ್‌ಆರ್ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳಿಗೆ ಕಾಂಕ್ರೀಟ್ ಮನೆ ಮತ್ತು ೫೦೦ ರೂ. ಪಿಂಚಣಿ ಒದಗಿಸಿತ್ತು. ಆ ಪುಟ್ಟ ಮನೆಯೊಂದೇ ಬೋ ಸಂಸಾರ. ಬಹಳಷ್ಟು ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡ ಬೋ ಎಸ್‌ಆರ್‌ಗೆ
ಮಕ್ಕಳೂ ಇರಲಿಲ್ಲ. ಜೀವನದ ಕೊನೆ ಗಳಿಗೆಯಲ್ಲಿ ಆಕೆ, ''ನಮ್ಮ ಜನಾಂಗದಲ್ಲಿ ನಾನು ಒಬ್ಬಳೇ ಉಳಿದಿದ್ದೇನೆ. ನಾನು ಕೊನೆಯವಳು ಎಂಬುವುದು ಹೆಮ್ಮೆಯಾಗುತ್ತಿದೆ. ಆದರೆ, ನಾನು ಮತ್ತೆ ಹುಟ್ಟಿದ ಆ ದಟ್ಟಾರಣ್ಯಕ್ಕೆ ಮರಳಬೇಕು. ಈ ನಾಡಿಗಿಂತ ಆ ಕಾಡು ಚೆನ್ನ. ಅದೇ ಮುಳ್ಳುಹಂದಿ, ಆಮೆ ಬೇಟೆಯಾಡಬೇಕು. ಕಾಡಿನೊಂದಿಗೆ ಮತ್ತೆ ನಾನು ಬದುಕಬಲ್ಲೆ. ಕಾಡಿನಲ್ಲಿ ನನ್ನ ಭವಿಷ್ಯ ಇದೆ, ಕಾಡಾದರೂ ನನಗೆ ಸಂಗಾತಿಯಾಗುತ್ತಿತ್ತು.... ''ಎಂದು ಹಂಬಲಿಸುತ್ತಿದ್ದಳಂತೆ.

ಸಂಸ್ಕೃತಿ ಕಳಚಿಕೊಂಡಿತ್ತು

ಇದೀಗ ಬೋ ಎಸ್‌ಆರ್ ಅವಳನ್ನು ಕಳೆದುಕೊಂಡ ಅಂಡಮಾನಿನ ಜನತೆಗೆ ಅದೇನೋ ಆಪ್ತರನ್ನು ಕಳೆದುಕೊಂಡ ಭಾವ. ಆಕೆಯ ಸಾವಿನೊಂದಿಗೆ ಕೇವಲ ಒಂದು ಭಾಷೆ ಮಾತ್ರವಲ್ಲ ದೇಶದ ವಿಶಿಷ್ಟ ಸಂಸ್ಕೃತಿಯೊಂದು ಕಳಚಿಹೋಗಿಬಿಟ್ಟಿದೆ. ಭಾಷಾ ತಜ್ಞರು ಬೋ ಭಾಷೆಯ ಬಗ್ಗೆ ಅದೆಷ್ಟೋ ಅಧ್ಯಯನಗಳನ್ನು ಮಾಡಿದರೂ, ಕೊನೆಯ ಕ್ಷಣಗಳಲ್ಲಿ ಆಕೆ ತನ್ನ ಮಾತೃಭಾಷೆಯನ್ನು ಮಾತನಾಡಲಾಗದೇ ಹೋಗಿಬಿಟ್ಟಳು! ಬೋ ಎಸ್‌ಆರ್ ಸಾವು ಒಂದು ರೀತಿಯಲ್ಲಿ ನಮಗೊಂದು ರಿಮೈಂಡರ್ ಇದ್ದ ಹಾಗೆ. ಬುಡಕಟ್ಟು ಜನಾಂಗ ದೇಶದ ಸಾಂಸ್ಕೃತಿಕತೆಯ ಕೊಂಡಿ ಇದ್ದಂತೆ ಎಂದು ಬೋ ಜನಾಂಗದ ಕುರಿತು
ಅಧ್ಯಯನ ನಡೆಸಿರುವ ಭಾಷಾ ತಜ್ಞೆ ಅನ್ವಿತಾ ಅಬ್ಬಿ ಅವರ ಅಭಿಪ್ರಾಯ. ಅಭಿವೃದ್ಧಿ ಎಂದರೆ ಕೇವಲ ಮುಖ್ಯವಾಹಿನಿಗಳನ್ನು ಮಾತ್ರ ಗಮನಿಸುತ್ತೇವೆ. ಇಂದಿಗೂ ದೇಶದ ದಟ್ಟಾರಣ್ಯಗಳಲ್ಲಿ ಇಂಥ ಬುಡಕಟ್ಟು ಜನಾಂಗಗಳು ಅತ್ತ ಸಾಯದೆಯೇ, ಇತ್ತ ಬದುಕಲೂ ಆಗದ ಸ್ಥಿತಿಯಲ್ಲಿದ್ದಾರೆ. ಸಾವಿರಾರು ವರ್ಷಗಳ ಸಾಂಸ್ಕೃತಿಕತೆಯ ಕೊಂಡಿಗಳನ್ನು ಇಂದಿಗೂ ನಾವು ಗುರುತಿಸುವ ಅಗತ್ಯವಿದೆ.

ಹಳೆಯ ನೆನಪು
ಸುಮಾರು ೨೨ ವರ್ಷಗಳ ಹಿಂದಿನ ಕಥೆಯದು. ಆವಾಗ ಅಮ್ಮ ಕಟ್ಟಿಗೆ ತರಲು ಕಾಡಿಗೆ ಹೋದರೆ ನಾನೂ ಅಮ್ಮನ ಜೊತೆ ಹೋಗುತ್ತಿದ್ದೆ. ಕಾಡಿಗೆ ಹೋದರೆ, ದೊಡ್ಡ ಕಾಡುಗಳ ಮಧ್ಯೆ ಬುಟ್ಟಿ ಹೆಣೆಯುತ್ತಲೋ, ಇನ್ನೇನೋ ತಮ್ಮ ಕೆಲಸಗಳಲ್ಲಿ ನಿರತರಾಗಿರುವ 'ಕೊರಗ' ಜನಾಂಗದವರು ಸಿಗುತ್ತಿದ್ದರು. ಅವರ ಬಗ್ಗೆ ಅಮ್ಮನ ಬಳಿ ಕೇಳಿದರೆ, 'ಅವರನ್ನು ಕೊರಗರು ಎಂದು ಕರೆಯುತ್ತಾರೆ. ಅವರಿಗೆ ಮನೆ-ಮಠಗಳಿಲ್ಲ. ಅಲೆಮಾರಿಗಳಂತೆ ಹೋದಲ್ಲಿ ಜೀವಿಸುತ್ತಾರೆ' ಎನ್ನುತ್ತಿದ್ದಳು. ನಾನು ಸಣ್ಣವಳಿದ್ದಾಗ ಕಾಡಿಗೆ ಹೊಕ್ಕರೆ ಇಂಥ ಕೊರಗರು ತುಂಬಾ ಜನ ಸಿಗುತ್ತಿದ್ದರು. ತುಳುವಿಗಿಂತ ಭಿನ್ನವಾದ ಕೊರಗ ಭಾಷೆಯನ್ನೇ ಅವರು ಮಾತನಾಡುತ್ತಿದ್ದುದು ಇನ್ನೂ ನೆನಪು.

ಆದರೆ, ಕಾಲ ಎಷ್ಟು ಬದಲಾಗುತ್ತೆ ಅಂದ್ರೆ ಈಗ ನೋಡಿದ್ರೆ ನಮ್ಮೂರಲ್ಲಿ ಒಬ್ಬರೇ ಒಬ್ಬರು ಕೊರಗರು ಸಿಗುವುದು ಕೂಡ ಕಷ್ಟವೇ. ಒಂದು ವೇಳೆ ಇದ್ದರೂ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಯಾರಿಗೂ ಇವರು ಕೊರಗರು ಎಂದು ಗೊತ್ತಾಗುವುದೇ ಇಲ್ಲ. ಏಕೆಂದರೆ ಕೊರಗ ಭಾಷೆಯ ಮೇಲೆ ಹಿಡಿತ ಸ್ಥಾಪಿಸಿ ಅದರ ನಾಶಕ್ಕೆ ಕಾರಣವಾಗಿದ್ದು ತುಳು ಭಾಷೆ. ಅತ್ಯಂತ ಶೋಷಿತ ಜನಾಂಗವೆಂದೇ ಪರಿಗಣಿಸಲ್ಪಟ್ಟ ಕೊರಗ ಜನಾಂಗ ಈಗ ಮುಖ್ಯವಾಹಿನಿಯೊಳಗೆ ಬೆರೆತಿರುವುದು 'ನಾಗರೀಕತೆ'ಯನ್ನು ತನ್ನದಾಗಿಸಿಕೊಳ್ಳುವುದು ಮತ್ತು ಶೋಷಿತ ಸಮಾಜದಿಂದ ಬಿಡುಗಡೆ ಹೊಂದುವ ಸಂಕೇತವಾಗಿರಲೂಬಹುದು. ಆದರೆ, ಇಂದು ಅವರು ಮುಖ್ಯವಾಹಿನಿಯಲ್ಲಿ ಸೇರುವುದರ ಜೊತೆಗೆ, ಅವರ ಭಾಷೆಯೂ ಸತ್ತುಹೋಗಿದೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಂಸ್ಕೃತಿಕ ನೆಲೆಗಳನ್ನೇ ತೊರೆಯುವ ಅನಿವಾರ್ಯತೆ ಎದುರಾಗುತ್ತದೆ ಎಂಬುವುದಕ್ಕೆ 'ಕೊರಗ' ಜನಾಂಗವೂ ಉತ್ತಮ ಉದಾಹರಣೆಯಾದೀತು.

ಪ್ರಕಟ: http://www.hosadigantha.in/epaper.php?date=10-14-2010&name=10-14-2010-7

1 comment:

  1. ಇತ್ತೀಚೆಗಿನ ದಿನಗಳಲ್ಲಿ ಕೊರಗ ಜನಾಂಗದ ಭಾಷೆಯು ನಾಶವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಭಾಷೆಯನ್ನು ಉಳಿಸಿಕೊಂಡರೆ ಮಾತ್ರ ಕೊರಗರ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ.dinesh kenjoor

    ReplyDelete